ಅಸ್ಸಾಂನ ಸಿಲ್ಚಾರ್‌ನಲ್ಲಿರುವ ಬಿಜೆಪಿ ಸಂಸದರೊಬ್ಬರ ಮನೆಯಲ್ಲಿ ಶನಿವಾರ (ಆಗಸ್ಟ್ 27) ತಡರಾತ್ರಿ 10 ವರ್ಷದ ಬಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಐದನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕ ಸಿಲ್ಚಾರ್ ಸಂಸದ ರಾಜ್‌ದೀಪ್ ರಾಯ್ ಅವರ ಮನೆಯಲ್ಲಿ ತನ್ನ ತಾಯಿ ಮತ್ತು ಅಕ್ಕನೊಂದಿಗೆ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ.
ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.
ಬಾಲಕನ ಪೋಷಕರು ಕ್ಯಾಚಾರ್ ಜಿಲ್ಲೆಯ ಪಲೋಂಗ್ ಘಾಟ್ ಪ್ರದೇಶದವರಾಗಿದ್ದು, ಅವರ ತಾಯಿ ಸಂಸದ ರಾಜದೀಪ್ ರಾಯ್ ಅವರ ಮನೆಯಲ್ಲಿ ಮನೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಮಹಿಳೆಯು ಕೆಲವು ವರ್ಷಗಳ ಹಿಂದೆ ತನ್ನ ಇಬ್ಬರು ಮಕ್ಕಳನ್ನು ಉತ್ತಮ ಶಿಕ್ಷಣವನ್ನು ನೀಡುವ ಸಲುವಾಗಿ ಸಿಲ್ಚಾರ್‌ಗೆ ಕರೆತಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಕಾವೇರಿ ನದಿ ವಿವಾದ : ವಾಸ್ತವ ಸ್ಥಿತಿ ಕುರಿತು ವರದಿಗೆ ಸೂಚಿಸಿ ಸೆ 1ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ
ಘಟನೆಯ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಸಂಸದರು ತಮ್ಮ ಮನೆಗೆ ಧಾವಿಸಿ, ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
“ಬಾಲಕನು ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ ನಂತರ ನಾನು ಮನೆಗೆ ಧಾವಿಸಿದೆ. ಬಾಲಕನಿದ್ದ ಕೋಣೆ ಒಳಗಿನಿಂದ ಮುಚ್ಚಲಾಗಿತ್ತು. ಪೊಲೀಸರು ಬಾಗಿಲನ್ನು ಒಡೆದು ಕೊಠಡಿ ಪ್ರವೇಶಿಸಿದಾಗ ಹುಡುಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ. ನಾವು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದೆವು. ವೈದ್ಯರು ಕೂಡ ಆತನನ್ನು ಬದುಕಿಸಲು ಪ್ರಯತ್ನಿಸಿದರು. ಆದರೆ ಸಮಯ ಮೀರಿತ್ತು. ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು” ಎಂದು ಸಂಸದ ರಾಜ್‌ದೀಪ್ ರಾಯ್ ತಿಳಿಸಿದ್ದಾರೆ.
ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆಯ ಪ್ರಕರಣ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ವಿಡಿಯೋ ಗೇಮ್ ಆಡಲು ಮೊಬೈಲ್ ಫೋನ್ ಸಿಗದಿದ್ದಕ್ಕೆ ಬಾಲಕ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದ ಎಂದು ಆತನ ಕುಟುಂಬದ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.