ಸ್ಥಳೀಯರನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಮಣಿಪುರದ ವಿವಿಧ ಭಾಗಗಳಿಂದ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ. ಅವರಿಂದ ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶನಿವಾರ ಇಂಫಾಲ್ ಪಶ್ಚಿಮ, ಕಾಕ್ಚಿಂಗ್, ಬಿಷ್ಣುಪುರ ಮತ್ತು ತೌಬಲ್ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ. ಬಂಧಿತರಲ್ಲಿ ನಿಷೇಧಿತ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷದ (ಎಂಸಿ ಪ್ರೋಗ್ರೆಸ್ಸಿವ್) ನಾಲ್ವರು ಕಾರ್ಯಕರ್ತರು ಸೇರಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರಕ್ಕೆ 2 ವರ್ಷ; ನಿಲ್ಲದ ಸಂಘರ್ಷ
ಪೊಲೀಸರು ಆರೋಪಿಗಳ ಬಳಿಯಿಂದ ಎರಡು ಪಿಸ್ತೂಲ್‌ಗಳು ಮತ್ತು 27 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಭದ್ರತಾ ಪಡೆಗಳು ಹೆಚ್ಚುವರಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2023ರ ಮೇ ತಿಂಗಳಲ್ಲಿ ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿದ್ದು, ಹಲವು ಮನೆ, ಪೊಲೀಸ್ ಠಾಣೆಗಳಲ್ಲಿ ದರೋಡೆ ನಡೆದಿದೆ. ಶಸ್ತ್ರಾಸ್ತ್ರಗಳನ್ನೂ ದರೋಡೆ ಮಾಡಲಾಗಿದೆ. ಸದ್ಯ ಪರಿಸ್ಥಿತಿ ಕೊಂಚ ಸುಧಾರಿಸಿದೆ. ದರೋಡೆಯಾದ ಶಸ್ತ್ರಾಸ್ತ್ರಗಳನ್ನು ವಾಪಸ್ ಪಡೆಯಲಾಗುತ್ತಿದೆ.
