ಗುಜರಾತಿನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ A1- 171 ವಿಮಾನ ಪತನದಲ್ಲಿ 242 ಪ್ರಯಾಣಿಕರ ಪೈಕಿ 117ಮಂದಿ ಮೃತಪಟ್ಟಿದ್ದಾರೆ. 132 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾತ್ಕಾಲಿಕವಾಗಿ ಏರ್ಪೋರ್ಟ್ ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಯುಯಾನ ತನಿಖಾ ಸಂಸ್ಥೆಯಿಂದ ತನಿಖೆ ಆರಂಭವಾಗಿದೆ. ಘಟನಾ ಸ್ಥಳಕ್ಕೆ ಗೃಹಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ವಿಮಾನ ಟೇಕ್ ಆಫ್ ಆದ ಕೇವಲ ಐದು ನಿಮಿಷದಲ್ಲಿ, ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಪತನಗೊಂಡಿದೆ ಎಂದು ವರದಿಯಾಗಿದೆ. ಎರಡು ನವಜಾತ ಶಿಶುಗಳು, ಹನ್ನೊಂದು ಮಕ್ಕಳು ಮೃತರಲ್ಲಿ ಸೇರಿದ್ದಾರೆ ಎಂದು ಗೊತ್ತಾಗಿದೆ. ದುರಂತಕ್ಕೆ ಏರ್ ಇಂಡಿಯಾ ವ್ಯವಸ್ಥಾಪಕ ಚಂದ್ರಶೇಖರನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ ಒಂದೂವರೆಯ ವೇಳೆಗೆ ಟೇಕ್ ಆಫ್ ಆದ ವಿಮಾನ ಕೇವಲ ಎಂಟುನೂರು ಅಡಿ ಎತ್ತರದಿಂದ ವಸತಿ ಪ್ರದೇಶದಲ್ಲಿ ಪತನಗೊಂಡಿದೆ. ಪಾರ್ಕಿಂಗ್ ಮಾಡಿದ್ದ ಕಾರುಗಳು ಸುಟ್ಟು ಕರಕಲಾಗಿದೆ. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.