ಉಕ್ರೇನ್ ವಿರುದ್ಧ ಯುದ್ಧ ನಡೆಸಿ ರಷ್ಯಾ ಸೇನೆಯು ಹಲವಾರು ಭಾರತೀಯರನ್ನು ಬಲವಂತವಾಗಿ ಸೇನೆಯಲ್ಲಿ ಕೆಲಸ ಮಾಡಿಸಿಕೊಂಡಿದೆ ಎಂಬ ಆರೋಪ ಹಲವು ತಿಂಗಳುಗಳಿಂದ ಕೇಳಿಬಂದಿದೆ. ಭಾರತಕ್ಕೆ ಮರಳಿದ ಹಲವಾರು ಯುವಜನರು ಆ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ, ವಿದೇಶಾಂಗ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು, “ರಷ್ಯಾದ ಸೇನೆಯಲ್ಲಿ ಸೇವೆ ಕೆಲಸ ಮಾಡಿದ 12 ಭಾರತೀಯ ನಾಗರಿಕರು ಸಾವನ್ನಪ್ಪಿದ್ದಾರೆ. 16 ಮಂದಿ ಕಾಣೆಯಾಗಿದ್ದಾರೆ” ಎಂದು ಹೇಳಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾಹತಿ ನೀಡಿದ್ದು, “ರಷ್ಯಾದ ಸೇನೆಯಲ್ಲಿ 126 ಭಾರತೀಯ ನಾಗರಿಕರು ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅವರಲ್ಲಿ, 96 ಮಂದಿಯನ್ನು ರಷ್ಯಾ ಸೇನೆಯಿಂದ ಬಿಡುಗಡೆ ಮಾಡಿಸಿ, ಭಾರತಕ್ಕೆ ಕರೆತರಲಾಗಿದೆ” ಎಂದು ಹೇಳಿದ್ದಾರೆ.
“ಉಳಿದ 30 ಮಂದಿಯಲ್ಲಿ 18 ಮಂದಿ ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡಿದ್ದಾರೆ. ಆದರೂ, ಅವರಲ್ಲಿ 16 ಮಂದಿ ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ. ಅವರು ಕಾಣೆಯಾಗಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ಹೇಳಿಕೊಂಡಿದ್ದಾರೆ” ಎಂದು ಜೈಸ್ವಾಲ್ ತಿಳಿಸಿದ್ದಾರೆ.
“ನಾವು ರಷ್ಯಾದೊಂದಿಗೆ ಸಂಪರ್ಕದಲ್ಲಿದ್ದೇವೆ. ಉಳಿದವರನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಮತ್ತು ಭಾರತಕ್ಕೆ ಕಳುಹಿಸುವಂತೆ ಮಾಡಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದೇವೆ” ಎಂದು ಜೈಸ್ವಾಲ್ ಹೇಳಿದ್ದಾರೆ.