ಚಿಕಿತ್ಸೆಗೆಂದು ಒಂದು ದಿನದ ಮಟ್ಟಿಗೆ ಜೈಪುರ ಕೇಂದ್ರ ಕಾರಾಗೃಹದಿಂದ ಹೊರಬಂದ ನಾಲ್ವರು ಕೈದಿಗಳು ಪತ್ನಿ, ಪ್ರೇಯಸಿ, ಮಾಜಿ ಪ್ರೇಯಸಿಯ ಭೇಟಿ, ಹೊಟೇಲ್‌ನಲ್ಲಿ ಅವಲಕ್ಕಿ ಸೇವನೆ- ಹೀಗೆ ಒಂದು ದಿನದ ‘ಟ್ರಿಪ್’ ಮಾಡಿಕೊಂಡಿದ್ದಾರೆ! ದಿನವಿಡೀ ಜೈಲಿನಿಂದ ಹೊರಗೆ ಸ್ವಚ್ಛಂದವಾಗಿ ವಿಹರಿಸಲು ನಾಲ್ವರು ತೆತ್ತ ಲಂಚ 25 ಸಾವಿರ ರೂಪಾಯಿ!
ಜೈಪುರ ಕೇಂದ್ರ ಕಾರಾಗೃಹದ ‘ರಜೆ’ಯ ಮಜಾದ ಅಕ್ರಮ ತಡವಾಗಿ ಬಯಲಾಗಿದೆ. ಜೈಲಿನಿಂದ ನೇರವಾಗಿ ಆಸ್ಪತ್ರೆಗೆ ತಲುಬೇಕಿದ್ದ ಐವರು ಕೈದಿಗಳಲ್ಲಿ ಒಬ್ಬ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಉಳಿದ ನಾಲ್ವರು ಪತ್ನಿ, ಗೆಳತಿ, ಪ್ರೇಯಸಿಯ ಭೇಟಿಯಲ್ಲಿ ದಿನವಿಡೀ ಕಳೆದಿದ್ದಾರೆ. ನಗರವಿಡೀ ಸುತ್ತಾಡಿ ಸಂಭ್ರಮಿಸಿದ್ದಾರೆ.
ಇದನ್ನು ಓದಿದ್ದೀರಾ? ವಂಚನೆ ಪ್ರಕರಣ | ಚೈತ್ರಾ ಸೇರಿ ಏಳು ಮಂದಿ ಆರೋಪಿಗಳು ಅ.6ರವರೆಗೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ
ಈ ಕೆಲವೇ ತಾಸುಗಳ ಸ್ವತಂತ್ರದ ಸವಿಯ ಬದಲಿಗೆ ಕಾನ್‌ಸ್ಟೆಬಲ್‌ಗಳು ಕೈದಿಗಳಿಂದ ಲಂಚ ಪಡೆದಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಕಾನ್‌ಸ್ಟೆಬಲ್‌ಗಳು, ನಾಲ್ವರು ಕೈದಿಗಳು ಮತ್ತು ನಾಲ್ವರು ಸಂಬಂಧಿಕರು ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರಫೀಕ್ ಬಕ್ರಿ, ಭಂವರ್ ಲಾಲ್, ಅಂಕಿತ್ ಬನ್ಸಲ್ ಮತ್ತು ಕರಣ್ ಗುಪ್ತಾ ಎಂಬ ನಾಲ್ವರು ಕೈದಿಗಳು ಎಸ್‌ಎಂಎಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆಂದು ಹೊರಬೀಳಲು ಅನುಮತಿ ಪಡೆದಿದ್ದರು. ಆದರೆ ಆಸ್ಪತ್ರೆ ತಲುಪುವ ಬದಲು ದಿನವಿಡೀ ಮಜಾ ಮಾಡಲು ಕಾನ್‌ಸ್ಟೆಬಲ್‌ಗಳಿಗೆ ಲಂಚ ನೀಡಿದ್ದಾರೆ. ಶನಿವಾರ ಸಂಜೆ 5.30ರ ಗಡುವಿನೊಳಗೆ ನಾಲ್ವರೂ ಜೈಲಿಗೆ ಹಿಂತಿರುಗಬೇಕಾಗಿತ್ತು. ಆದರೆ ತಮ್ಮ ಬಂಧಮುಕ್ತ ಜೀವನದ ಸುಖ ಸವಿಯುತ್ತ ಮೈಮರೆತು ಸಂಜೆ ಸಮೀಪಿಸಿದ್ದನ್ನೂ ಮರೆತು ಸಿಕ್ಕಿಬಿದ್ದಿದ್ದಾರೆ. ಜೈಲು ಪಾಲಾಗಿದ್ದಾರೆ.
ತನಿಖಾಧಿಕಾರಿಯೊಬ್ಬರು ಹೇಳುವಂತೆ, “ಈ ವಿಹಾರಕ್ಕೆ ಮಧ್ಯವರ್ತಿಯ ಮೂಲಕ ತಲಾ ಸುಮಾರು 25,000 ರೂಪಾಯಿ ಲಂಚ ಪಡೆಯಲಾಗಿದೆ. ಕಾನ್‌ಸ್ಟೆಬಲ್‌ಗಳಿಗೆ ತಲಾ ಐದು ಸಾವಿರ ರೂಪಾಯಿಯ ಭರವಸೆಯನ್ನೂ ನೀಡಲಾಗಿದೆ”
ನಾಲ್ವರು ದಿನವಿಡೀ ಮಾಡಿದ್ದೇನು?
ರಫೀಕ್ ತನ್ನ ಪತ್ನಿಯನ್ನು, ಭಂವರ್ ತನ್ನ ಮಾಜಿ ಪ್ರೇಯಸಿಯನ್ನು ಜಲಪುರ ಹೋಟೆಲ್‌ನಲ್ಲಿ ಭೇಟಿಯಾಗಿದ್ದಾರೆ. ರಫೀಕ್ ಮತ್ತು ಪತ್ನಿ ಮಾದಕದ್ರವ್ಯ ಸಹಿತ ಸಿಕ್ಕಿಬಿದಿದ್ದಾರೆ. ಪ್ರಸ್ತುತ ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ (ಪೂರ್ವ) ತೇಜಸ್ವಾನಿ ಗೌತಮ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳಿಗೆ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ”ಪ್ರಬಂಧ ಸ್ಪರ್ಧೆ
ಇನ್ನೊಂದೆಡೆ ಅಂಕಿತ್ ಮತ್ತು ಕರಣ್ ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ತಂಗಿದ್ದರು. ಅಂಕಿತ್ ಗೆಳತಿ ಕೊಠಡಿ ಬುಕ್ ಮಾಡಿದ್ದರು. ಅದೇ ಹೋಟೆಲ್‌ನಲ್ಲಿ ಆರಾಮವಾಗಿ ಕುಳಿತು ಅವಲಕ್ಕಿ ಸವಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಕರಣ್ ತನ್ನ ಸಂಬಂಧಿಯನ್ನು ಹೋಟೆಲ್ ಒಂದರಲ್ಲಿ ಭೇಟಿಯಾಗಿದ್ದಾನೆ. ಕರಣ್ ಸಂಬಂಧಿ ಬಳಿ 45,000 ರೂ. ನಗದು ಮತ್ತು ಹಲವು ಕೈದಿಗಳ ಗುರುತಿನ ಚೀಟಿಗಳು ಪತ್ತೆಯಾಗಿವೆ. ಈತನನ್ನೂ ಪೊಲೀಸರು ಬಂಧಿಸಿದ್ದಾರೆ.
ಇವರಷ್ಟೇ ಅಲ್ಲ, ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಬೇರೆ ಬೇರೆ ಕೈದಿಗಳು ಪ್ಯಾಕೇಜ್ ಪ್ರಕಾರದಲ್ಲಿ ಕಾನ್‌ಸ್ಟೆಬಲ್‌ಗಳಿಗೆ ಲಂಚ ಕೊಟ್ಟು ಬೆಳಗಿನಿಂದ ಸಂಜೆಯವರೆಗೆ ವಿಹಾರಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ ಈ ಸಲ ಕೈದಿಗಳು ಸಮಯಕ್ಕೆ ಸರಿಯಾಗಿ ಹಿಂದಿರುಗದೆ ಈ ಜಾಲ ಬಹಿರಂಗವಾಗಿದೆ. ಈ ಬಗ್ಗೆ ಸವಾಯಿ ಮಾನ್ ಸಿಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಪುರ ಕೇಂದ್ರ ಕಾರಾಗೃಹದಲ್ಲಿ ತನಿಖೆ ಮತ್ತು ಶೋಧ ಆರಂಭಿಸಲಾಗಿದೆ.
