ಪಹಲ್ಗಾಮ್ ಉಗ್ರದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಅಕ್ರಮಿತ ಕಾಶ್ಮೀರದ ಸುಮಾರು ಒಂಭತ್ತು ಕಡೆಗಳಲ್ಲಿ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಉಗ್ರರು ಮತ್ತು ಅವರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದನ್ನು ಸಹಿಸಿಕೊಳ್ಳಲಾಗದ ಪಾಕಿಸ್ತಾನದ ಸೇನೆಯು ಭಾರತದ ಅಡಿಯಲ್ಲಿರುವ ಪೂಂಚ್ ಪ್ರದೇಶದಲ್ಲಿ ಜನ ವಾಸವಾಗಿರುವ ಪ್ರದೇಶಗಳು, ರಸ್ತೆಗಳ ಮೇಲೆ ದಾಳಿ ನಡೆಸಿದೆ. ಈ ಶೆಲ್ ದಾಳಿಯಿಂದ 15 ಮಂದಿ ನಾಗರಿಕರು ಮೃತಪಟ್ಟಿದ್ದು, 43 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಶೆಲ್ ದಾಳಿಯಿಂದ ಮನೆ ಮತ್ತು ಅಂಗಡಿಗಳಿಗೆ ಗುಂಡು ತಾಕಿರುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನವು ಅಮಾಯಕ ಪ್ರವಾಸಿಗರು, ಮನೆಗಳಲ್ಲಿರುವ ನಿರಾಯುಧ ನಾಗರಿಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವುದರಿಂದ ಗಡಿಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ.
ಎಲ್‌ಒಸಿಯ ಪ್ರದೇಶವಾಗಿರುವ ಪೂಂಚ್ ಮತ್ತು ರಾಜೌರಿ, ತಂಗ್ದಾರ್ ಪ್ರದೇಶಗಳಲ್ಲಿನ ಜನವಸತಿಯ ಪ್ರದೇಶಗಳ ಹಲವೆಡೆ ಶೆಲ್ ದಾಳಿ ನಡೆಸಿರುವ ಪಾಕಿಸ್ತಾನವು, ನಾಗರಿಕರನ್ನು ಗುರಿಯಾಗಿಸಿರುವುದಾಗಿ ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಪಾಕಿಸ್ತಾನ ಸೇನೆಯ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದವರ ಪೈಕಿ 4 ಮಂದಿ ಕೇವಲ ಮಕ್ಕಳು ಎಂದು ತಿಳಿದುಬಂದಿದೆ. ಮೃತಪಟ್ಟವರನ್ನು ಮರಿಯಮ್ ಖಾತೂನ್ (7 ವರ್ಷ), ಮೊಹಮ್ಮದ್ ಜೈನ್ ಖಾನ್ (10 ವರ್ಷ), ಝೋಯಾ ಖಾನ್ (12 ವರ್ಷ) ಹಾಗೂ ವಿಹಾನ್ ಭಾರ್ಗವ್ (13 ವರ್ಷ) ಎಂದು ಅಧಿಕಾರಿಗಳು ಗುರುತಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಪರೇಷನ್ ಸಿಂಧೂರ – ಪಾಕ್ ಭಯೋತ್ಪಾದನೆಗೆ ತಕ್ಕ ಶಾಸ್ತಿ!
ಪೂಂಚ್ ಜಿಲ್ಲಾಡಳಿತವು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ಯಾವುದೇ ಸಹಾಯ ಅಥವಾ ಸ್ಪಷ್ಟೀಕರಣಕ್ಕಾಗಿ 01965-220258 ಅಥವಾ 90862-53188 ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ.
15 civilians killed in Pak shelling near LoC
— IndiaToday (@IndiaToday) May 7, 2025
Indian forces remain on high alert along LoC
Civilians evacuated from Uri, Poonch and Rajouri@shivanipost and @sunilJbhat join us with the latest#OperationSindoor #NewsToday (@sardesairajdeep) pic.twitter.com/6ewazV6V9b
ಪೂಂಚ್ ಸೇರಿದಂತೆ ಎಲ್‌ಒಸಿಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವಂತೆ ಕೇಂದ್ರ ಗೃಹ ಇಲಾಖೆಯು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದೆ. ಅಲ್ಲದೇ, ನಡೆಯುತ್ತಿರುವ ಎಲ್ಲ ಬೆಳವಣಿಗೆಗಳ ಬಗ್ಗೆ ನಿಗಾ ವಹಿಸಿರುವುದಾಗಿ ವರದಿ ತಿಳಿಸಿದೆ.
