ನೆರೆಯ ದೇಶದ ಬಂಡುಕೋರರ ಗುಂಪು ತಮ್ಮ ಸೇನಾ ಶಿಬಿರವನ್ನು ಅತಿಕ್ರಮಣ ಮಾಡಿದ ಕಾರಣಕ್ಕೆ 151 ಮಯನ್ಮಾರ್ ಸೈನಿಕರು ಮಿಜೋರಾಂನ ಲಾಂಗ್ತಲೈ ಜಿಲ್ಲೆಗೆ ಪ್ರವೇಶಿಸಿದ್ದಾರೆ ಎಂದು ಅಸ್ಸಾಂ ರೈಫಲ್ ಅಧಿಕಾರಿಗಳು ತಿಳಿಸಿದ್ದಾರೆ.
“ಬಂಡುಕೋರರ ಗುಂಪು ಸೇನಾ ಶಿಬಿರವನ್ನು ಅತಿಕ್ರಮಿಸಿದ ನಂತರ ನಮ್ಮನ್ನು ಸಂಪರ್ಕಿಸುವ ಮೂಲಕ ‘ತತ್ಮಾದವ್’ ಎಂದು ಕರೆಯಲ್ಪಡುವ ಮಯನ್ಮಾರ್ ಸೇನಾ ಸಿಬ್ಬಂದಿ ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಮಿಜೋರಾಂನ ಲಾಂಗ್ತಲೈ ಜಿಲ್ಲೆಯ ತೋಯ್ಸತ್ಲಾಂಗ್ ಪ್ರದೇಶಕ್ಕೆ ಅಂತಾರಾಷ್ಟ್ರೀಯ ಗಡಿಯ ಮೂಲಕ ಪ್ರವೇಶಿಸಿದರು” ಎಂದು ಅಸ್ಸಾಂ ರೈಫಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಅಂತಾರಾಷ್ಟ್ರೀಯ ಗಡಿಯ ಸಮೀಪ ನೆರೆಯ ದೇಶದ ಬಂಡುಕೋರರ ಗುಂಪಿನೊಂದಿಗೆ ಮಯನ್ಮಾರ್ ಸೈನಿಕರು ಗುಂಡಿನ ಚಕಮಕಿ ನಡೆಸಿದ ನಂತರ ಮಿಜೋರಾಂ ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ; ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಏನು ಮಾಡುತ್ತಿವೆ?
151 ಸೈನಿಕರು ಶುಕ್ರವಾರ(ಡಿ.29) ಮಿಜೋರಾಂ ಪ್ರವೇಶಿಸಿದಾಗ ಬಹುತೇಕರು ಗಾಯಗೊಂಡಿದ್ದರು. ಅವರಿಗೆಲ್ಲರಿಗೂ ಅಸ್ಸಾಂ ರೈಫಲ್ನಿಂದ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಸದ್ಯ ಮಯನ್ಮಾರ್ ಸೈನಿಕರು ಲಾಂಗ್ತಲೈ ಜಿಲ್ಲೆಯ ತೋಯ್ಸತ್ಲಾಂಗ್ ಪ್ರದೇಶದಲ್ಲಿ ಅಸ್ಸಾಂ ರೈಫಲ್ನ ಭದ್ರತೆಯೊಂದಿಗೆ ಸುರಕ್ಷಿತವಾಗಿದ್ದಾರೆ.
ಭಾರತದ ವಿದೇಶಾಂಗ ಇಲಾಖೆ ಹಾಗೂ ಮಯನ್ಮಾರ್ನ ಮಿಲಿಟರಿ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದ್ದು, ಕೆಲವು ದಿನಗಳಲ್ಲಿ ವಾಪಸ್ ಮಯನ್ಮಾರ್ಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನವೆಂಬರ್ನಲ್ಲೂ ಕೂಡ 104 ಮಯನ್ಮಾರ್ನ ಸೈನಿಕರು ತಮ್ಮ ದೇಶದ ಪಿಡಿಎಂ ಎಂಬ ಸಂಘಟನೆಯ ಅತಿಕ್ರಮಣದಿಂದಾಗಿ ಸೇನಾ ಶಿಬಿರದಿಂದ ಅಂತಾರಾಷ್ಟ್ರೀಯ ಸೇನಾ ಗಡಿಯ ಮೂಲಕ ಮಿಜೋರಾಂ ಪ್ರವೇಶಿಸಿದ್ದರು. ಅವರನ್ನು ಭಾರತದ ವಾಯುಪಡೆಯ ಸಿಬ್ಬಂದಿ ಏರ್ಲಿಫ್ಟ್ ಮೂಲಕ ವಾಪಸ್ ಕಳುಹಿಸಿಕೊಟ್ಟಿದ್ದರು.