2017ರಲ್ಲಿ ದಲಿತ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ್ದ 17 ಮಂದಿ ಪ್ರಬಲ ಜಾತಿಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ಸೆಷನ್ ನ್ಯಾಯಾಲಯವು ತೀರ್ಪು ನೀಡಿದೆ.
ತೆಲಂಗಾಣದ ಭೋಂಗಿರ್ ಜಿಲ್ಲೆಯ ಅಜಿಂಪೇಟೆಯಲ್ಲಿ ದಲಿತ ಯುವಕ ಬಟ್ಟ ಲಿಂಗಯ್ಯ ಎಂಬವರನ್ನು 17 ಮಂದಿ ಪ್ರಬಲ ಜಾತಿಯವರು ಕೊಲೆ ಮಾಡಿದ್ದರು. ಘಟನೆ ಸಂಬಂಧ 17 ಮಂದಿ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ರಾಚಕೊಂಡ ಪೊಲೀಸರ ಪ್ರಕಾರ, 2017ರಲ್ಲಿ ದಲಿತ ಯುವಕ ಲಿಂಗಯ್ಯ ಹಿಂದುಳಿದ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. 3 ತಿಂಗಳು ಜೈಲಿನಲ್ಲಿದ್ದು, ಹೊರಬಂದಿದ್ದರು. ಅವರ ವಿರುದ್ಧ ಇನ್ನೂ ಪ್ರಕರಣವೂ ಸಾಬೀತಾರಲಿಲ್ಲ.
ಆದಾಗ್ಯೂ, ಲಿಂಗಯ್ಯನೇ ಅಪರಾಧಿ ಎಂದು ನಿರ್ಧರಿಸಿದ್ದ ಮೃತ ಸಂಬಂಧಿಕರು ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದರು. ದಸರಾ ಆಚರಣೆಯ ಸಮಯದಲ್ಲಿ 17 ಮಂದಿ ಪ್ರಬಲ ಜಾತಿಯವರು ಸೇರಿ ಲಿಂಗಯ್ಯನನ್ನು ಕೊಲೆ ಮಾಡಿದ್ದರು. ಏಳು ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿರುವ ವಿಶೇಷ ಸೆಷನ್ಸ್ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.