ಮಣಿಪುರದ ನರಂಸೇನಾ ಪ್ರದೇಶದಲ್ಲಿ ಶುಕ್ರವಾರ ಮಧ್ಯರಾತ್ರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರು ಹುತಾತ್ಮರಾಗಿದ್ದಾರೆ. ಕುಕಿ ಸಮುದಾಯಕ್ಕೆ ಸೇರಿದ ಉಗ್ರರು ನಡೆಸಿದ ದಾಳಿಯಲ್ಲಿ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಧ್ಯರಾತ್ರಿಯಲ್ಲಿ ಈ ದಾಳಿ ಆರಂಭವಾಗಿದ್ದು ಬೆಳಗಿನ ಜಾವ 2:15ರವರೆಗೆ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ದಾಳಿ ಮಾಡಲಾಗಿದೆ. ಪ್ರಾಣ ಕಳೆದುಕೊಂಡ ಸಿಬ್ಬಂದಿಗಳು ರಾಜ್ಯದ ಬಿಷ್ಣುಪುರ್ ಜಿಲ್ಲೆಯ ನರಸೇನಾ ಪ್ರದೇಶದಲ್ಲಿ ನಿಯೋಜಿಸಲಾದ ಸಿಆರ್‌ಪಿಎಫ್ 128 ಬೆಟಾಲಿಯನ್‌ನವರು ಆಗಿದ್ದರು.
ಈ ನಡುವೆ ಮಣಿಪುರ ಮುಖ್ಯ ಚುನಾವಣಾ ಅಧಿಕಾರಿ ಪ್ರದೀಪ್ ಕುಮಾರ್ ಝಾ ಅವರು ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಮಣಿಪುರದ ಹೊರಭಾಗದಲ್ಲಿ ಅಧಿಕ ಮತದಾನವಾಗಿದೆ ಮತ್ತು ಅಧಿಕ ಹಿಂಸಾಚಾರದ ಘಟನೆಗಳು ನಡೆದಿಲ್ಲ ಎಂದು ಶುಕ್ರವಾರ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ಮಣಿಪುರದಲ್ಲಿ 3 ಬಾರಿ ಸ್ಫೋಟ; ಸೇತುವೆಗೆ ಹಾನಿ
“ಸುಮಾರು ಒಂದು ಗಂಟೆಯ ಹಿಂದೆ ನಾವು ಸ್ವೀಕರಿಸಿದ ಕೊನೆಯ ವರದಿಯವರೆಗೂ, ಮತದಾನದ ಶೇಕಡ 75ರ ವ್ಯಾಪ್ತಿಯಲ್ಲಿತ್ತು. ಯಾವುದೇ ಪ್ರಮುಖ ಬಿಕ್ಕಟ್ಟುಗಳು ವರದಿಯಾಗಿಲ್ಲ” ಎಂದು ಶುಕ್ರವಾರ ಮಣಿಪುರ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ ಮಣಿಪುರದಲ್ಲಿ ಎರಡನೇ ಹಂತದ ಚುನಾವಣೆಯಲ್ಲಿ ಅಂತಿಮವಾಗಿ ಶೇಕಡ 78.78ರಷ್ಟು ಮತದಾನ ನಡೆದಿದೆ.
“ಎರಡನೇ ಹಂತದ ಮತದಾನದ ವೇಳೆ ಜನರು ತಮ್ಮ ಹಕ್ಕು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇವಿಎಂ ಸರಿಯಾಗಿ ಕಾರ್ಯನಿರ್ವಹಿಸದ ಘಟನೆಯೊಂದು ಮತಗಟ್ಟೆಯಲ್ಲಿ ವರದಿಯಾಗಿದೆ. ಉಳಿದಂತೆ ಎಲ್ಲಿಯೂ ಯಾವುದೇ ಅಡಚಣೆ ಉಂಟಾಗಿಲ್ಲ” ಎಂದು ತಿಳಿಸಿದರು.
“2019ರ ಚುನಾವಣೆಗೆ ಹೋಲಿಸಿದರೆ ಹೊರ ಮಣಿಪುರ ಕ್ಷೇತ್ರದಲ್ಲಿ ಮತದಾನವು ಹೆಚ್ಚು ಶಾಂತಿಯುತವಾಗಿದೆ. ಯಾವುದೇ ಪ್ರಮುಖ ಘಟನೆಗಳು ನಡೆದಿಲ್ಲ ಮತ್ತು ಮತದಾನವು ತುಂಬಾ ಉತ್ತೇಜನಕಾರಿಯಾಗಿದೆ” ಎಂದು ಝಾ ಹೇಳಿದ್ದರು.
ಇದನ್ನು ಓದಿದ್ದೀರಾ? ಮಣಿಪುರ| ಇವಿಎಂ ನಾಶ; ಏ. 22ರಂದು 11 ಮತಗಟ್ಟೆಗಳಲ್ಲಿ ಮರು ಮತದಾನ
ಈ ಮೊದಲು, ಏಪ್ರಿಲ್ 19 ರಂದು ಮೊದಲ ಹಂತದ ಮತದಾನದ ವೇಳೆ ಹಲವು ಹಿಂಸಾಚಾರದ ಘಟನೆಗಳು ನಡೆದಿದೆ. ಇವಿಎಂ ಧ್ವಂಸಗೊಳಿಸಲಾದ ಕಾರಣದಿಂದಾಗಿ ಒಳ ಮಣಿಪುರ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಏಪ್ರಿಲ್ 22 ರಂದು ಮರು ಮತದಾನ ನಡೆಸಲಾಗಿದೆ.
ಏಳು ಹಂತಗಳ ಸಾರ್ವತ್ರಿಕ ಚುನಾವಣೆಗೆ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 102 ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಏಪ್ರಿಲ್ 26ರಂದು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಸ್ಥಾನಗಳಿಗೆ ಎರಡನೇ ಹಂತದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ.
ಮೇ 7ರಂದು ಮುಂದಿನ ಸುತ್ತಿನ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ.