ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 20 ಸಾವಿರಕ್ಕೂ ಹೆಚ್ಚು ಕಾರು ಮಾಲೀಕರ ಪ್ರತಿ ಕಾರಿನ ಮೇಲೆ ತಲಾ 100 ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಆದರೆ ಅವುಗಳ ಮಾಲೀಕರು ಇನ್ನೂ ಕೂಡ ದಂಡವನ್ನು ಪಾವತಿಸಿಲ್ಲ ಎಂದು ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಸಂಚಾರ ಪೊಲೀಸರ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಇಂತಹ 20,684 ವಾಹನಗಳಿದ್ದು, ಇವುಗಳ ವಿರುದ್ಧ 100 ಅಥವಾ ಹೆಚ್ಚಿನ ಸಂಚಾರ ನಿಯಮ ಉಲ್ಲಂಘಿಸಿರುವ ನೋಟಿಸ್ ನೀಡಲಾಗಿದೆ. ಅಲ್ಲದೆ, ದೆಹಲಿಯಲ್ಲಿ 1.65 ಲಕ್ಷಕ್ಕೂ ಹೆಚ್ಚು ವಾಹನಗಳು 20 ಅಥವಾ ಅದಕ್ಕಿಂತ ಹೆಚ್ಚು ಉಲ್ಲಂಘನೆಯ ಪ್ರಕರಣಗಳನ್ನು ಹೊಂದಿವೆ.
ಆತಂಕಕಾರಿ ವಿಷಯವೇನೆಂದರೆ, ಈ ಪ್ರಕರಣಗಳು ಸಣ್ಣ ಸಂಚಾರಿ ಉಲ್ಲಂಘನೆಗಳನ್ನು ಒಳಗೊಂಡಿರದೆ, ನಿರ್ಲಕ್ಷ್ಯದ ಚಾಲನೆ, ಅತಿವೇಗದ ಚಾಲನೆ, ಕೆಂಪು ದೀಪ ಮತ್ತು ಅಸಮರ್ಪಕ ಲೇನ್ ಬದಲಾವಣೆಯಂತಹ ಪ್ರಮುಖವಾದ ಪ್ರಕರಣಗಳನ್ನು ಹೊಂದಿವೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಅತಿಥಿಗಳ ಸ್ವಾಗತಕ್ಕೆ ಶಿಷ್ಟಾಚಾರದ ಪ್ರಕಾರ ಅಧಿಕಾರಿಗಳ ನಿಯೋಜನೆ: ಸಿಎಂ ಸಿದ್ದರಾಮಯ್ಯ
ಈ ವಾಹನಗಳ ಮಾಲೀಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವಂತೆ ಕೋರಿ ಸಂಚಾರ ಪೊಲೀಸರು ಇದೀಗ ದೆಹಲಿ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇವುಗಳಲ್ಲಿ ಹಲವು ವಾಹನಗಳು ಬೇರೆ ರಾಜ್ಯಗಳಲ್ಲಿ ನೋಂದಣಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಚಾರ ಪೊಲೀಸರ ಪ್ರಕಾರ, ಈ ವರ್ಷ ಜೂನ್ 30ರ ಹೊತ್ತಿಗೆ ದೆಹಲಿಯಲ್ಲಿ 58 ಲಕ್ಷ ವಾಹನಗಳು ಒಟ್ಟು 2.6 ಕೋಟಿ ಉಲ್ಲಂಘನೆಯ ಪ್ರಕರಣಗಳನ್ನು ಎದುರಿಸುತ್ತಿವೆ. ಅವುಗಳಲ್ಲಿ 2.2 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ಸುಮಾರು 1.65 ಲಕ್ಷ ವಾಹನಗಳು 67 ಲಕ್ಷಕ್ಕೂ ಹೆಚ್ಚು ಉಲ್ಲಂಘನೆಯ ಪ್ರಕರಣಗಳನ್ನು ಹೊಂದಿವೆ.
ಈ ಪ್ರಕರಣಗಳು ಸಂಚಾರ ಸಿಬ್ಬಂದಿಯಿಂದ ಸ್ಥಳ ಪರಿಶೀಲನೆಯ ಸಮಯದಲ್ಲಿ ನೀಡಲಾದ ಮತ್ತು ಸಂಚಾರ ಕ್ಯಾಮೆರಾಗಳಿಂದ ಸೆರೆಹಿಡಿಯಲ್ಪಟ್ಟವುಗಳನ್ನು ಒಳಗೊಂಡಿವೆ.
ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ 14 ಲಕ್ಷ ಸಂಚಾರ ನಿಯಮ ಉಲ್ಲಂಘನೆ ದಾಖಲಾಗಿತ್ತು. ಇದು 2021 ರಲ್ಲಿ ವರದಿಯಾದ 18 ಲಕ್ಷ ಉಲ್ಲಂಘನೆಗಿಂತ ಕಡಿಮೆಯಾಗಿದೆ. ಈ ವರ್ಷ ದೆಹಲಿಯಲ್ಲಿ ಜೂನ್ 30 ರವರೆಗೆ 6.3 ಲಕ್ಷ ಸಂಚಾರ ಉಲ್ಲಂಘನೆಗಳು ವರದಿಯಾಗಿದೆ.