ಸರ್ಕಾರವು ಪ್ರತಿವರ್ಷ ಗಣನೀಯ ಸಾಧನೆಗೈದ ನಾಗರಿಕರಿಗೆ ಈ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ದೇಶದ 71 ಮಂದಿ ಗಣ್ಯರು 2025ನೇ ಸಾಲಿನ ಪ್ರತಿಷ್ಟಿತ ಪದ್ಮ, ಪದ್ಮವಿಭೂಷಣ ಹಾಗೂ ಪದ್ಮಭೂಷಣ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.
ಈ ಪೈಕಿ ನಾಲ್ವರಿಗೆ ಪದ್ಮವಿಭೂಷಣ, 10 ಮಂದಿಗೆ ಪದ್ಮಭೂಷಣ ಹಾಗೂ 57 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿವೆ.
ಪದ್ಮವಿಭೂಷಣ ಪ್ರಶಸ್ತಿ ವಿಜೇತರು:
ವೈದ್ಯಕೀಯ ಸೇವೆಗಾಗಿ ಡಾ. ಡಿ ನಾಗೇಶ್ವರ್ ರೆಡ್ಡಿ ಮತ್ತು ಕಲಾ ಕ್ಷೇತ್ರದ ಸಾಧನೆಗಾಗಿ ಡಾ. ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರನ್ನು ಗೌರವಿಸಲಾಗಿದೆ. ಜೊತೆಗೆ ಪ್ರಸಿದ್ಧ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಮತ್ತು ಜಪಾನಿನ ಉದ್ಯಮಿ ಒಸಾಮು ಸುಜುಕಿ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ.
ಪದ್ಮಭೂಷಣ ಪಡೆದವರು:
ತೆಲುಗು ಚಿತ್ರರಂಗದ ನಟ ನಂದಮೂರಿ ಬಾಲಕೃಷ್ಣ, ಹಿರಿಯ ಚಲನಚಿತ್ರ ನಿರ್ದೇಶಕ ಶೇಖರ್ ಕಪೂರ್, ಭಾರತ ಹಾಕಿ ತಂಡದ ಮಾಜಿ ಗೋಲ್ಕೀಪರ್ ಹಾಗೂ ನಾಯಕ ಶ್ರೀಜೇಶ್ ಪಿ ಆರ್ ಹಾಗೂ ರಾಜಕೀಯ ನಾಯಕ ದಿ. ಸುಶೀಲ್ ಕುಮಾರ್ ಮೋದಿ ಸೇರಿದಂತೆ 10 ಮಂದಿಗೆ ಈ ಗೌರವ ಲಭಿಸಿದೆ.
ಪದ್ಮಶ್ರೀ ಪುರಸ್ಕೃತರು:
ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎಸ್ಬಿಐಯ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಲೇಖಕ ಸ್ಟೀಫನ್ ನ್ಯಾಪ್, ಪಾಕಶಾಸ್ತ್ರ ಕಲೆ ಪ್ರಚಾರಕ ರೋನು ಮಜುಂದಾರ್, ಶಾಸ್ತ್ರೀಯ ಸಂಗೀತಜ್ಞ ಡಾ. ಕೆ ಓಮನ್ಕುಟ್ಟಿ ಅಮ್ಮ, ಕರ್ನಾಟಕದ 96 ವರ್ಷದ ತೊಗಲು ಗೊಂಬೆ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ವೇದ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಹಾಗೂ ಕುವೈತ್ನ ಯೋಗ ಶಿಕ್ಷಣ ಪ್ರವರ್ತಕಿ ಶೇಖಾ ಶೈಖಾ ಅಲಿ ಅಲ್-ಜಾಬರ್ ಅಲ್-ಸಬಾ ಸೇರಿದಂತೆ ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಸೇರಿದಂತೆ ವಿವಿಧ ವಿಭಾಗಗಳು ಮತ್ತು ಚಟುವಟಿಕೆಗಳ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ 57 ಮಂದಿ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ಹವಾಮಾನ | ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ: ಐಎಂಡಿ ಮುನ್ಸೂಚನೆ