ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ, ನಕಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿ ಜನರನ್ನು ಆನ್‌ಲೈನ್‌ನಲ್ಲಿ ವಂಚಿಸುತ್ತಿದ್ದ ಜಾಲವನ್ನು ಅಸ್ಸಾಂ ಪೊಲೀಸರು ಭೇದಿಸಿದ್ದಾರೆ. 2,200 ಕೋಟಿ ರೂ. ಹಗರಣವನ್ನು ಬಯಲಿಗೆ ಎಳೆದಿರುವ ಪೊಲೀಸರು, 38 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಸ್ಸಾಂನಲ್ಲಿ ಅನೇಕ ಆನ್‌ಲೈನ್ ವ್ಯಾಪಾರ ಸಂಸ್ಥೆಗಳು ಸೆಬಿ ಮತ್ತು ಆರ್‌ಬಿಐ ಮಾರ್ಗಸೂಚಿಗಳನ್ನು ಅನುಸರಿಸದೆ ವ್ಯವಹಾರ ನಡೆಸುತ್ತಿವೆ ಎಂದು ಇತ್ತೀಚೆಗೆ ವರದಿಯೊಂದು ಪ್ರಕರಣವಾಗಿತ್ತು. ಈ ಬೆನ್ನಲ್ಲೇ, ಆನ್‌ಲೈನ್ ವಂಚನೆಯ ಜಾಲದ ಆಮಿಷಗಳಿಗೆ ಮರುಳಾಗಿ ನಕಲಿ ಷೇರಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಜನರಲ್ಲಿ ಮನೆ ಮಾಡಿದ್ದರು. ವಂಚನೆಯ ಜಾಲವನ್ನು ಭೇದಿಸಲು ಪೊಲೀಸರ ತಂಡವನ್ನು ರಚಿಸಲಾಗಿತ್ತು.
ಈ ವರದಿ ಓದಿದ್ದೀರಾ?: 2 ಲಕ್ಷ ಸರ್ಕಾರಿ ನೌಕರರ ವೇತನ ತಡೆಹಿಡಿದ ಯೋಗಿ ಸರ್ಕಾರ
ಆನ್‌ಲೈನ್ ಟ್ರೇಡಿಂಗ್ ವಂಚನೆಯ ಬಗ್ಗೆ ಮಾತನಾಡಿದ್ದ ಶರ್ಮಾ, “ವಂಚಕರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪೊಲೀಸರು ವಂಚನೆಯ ಪ್ರಕರಣ ದಾಖಲಿಸಿದ್ದಾರೆ. ಎಲ್ಲ ವಂಚನೆಯ ಜಾಲಗಳನ್ನು ಭೇದಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಹೇಳಿದ್ದರು.
ವಂಚನೆಯ ಪ್ರಕರಣ ದಾಖಲಿಸಕೊಂಡಿದ್ದ ಸೈಬರ್ ಪೊಲೀಸರು ದಿಬ್ರುಗಢ್‌ನ ಆನ್‌ಲೈನ್ ಉದ್ಯಮಿ ವಿಶಾಲ್ ಫುಕನ್ ಮತ್ತು ಗುವಾಹಟಿಯ ಸ್ವಪ್ನಿಲ್ ದಾಸ್ ಎಂಬ ಆರೋಪಿಗಳು ಸೇರಿದಂತೆ 38 ಮಂದಿಯನ್ನು ಬಂಧಿಸಿದ್ದಾರೆ. ವಿಶಾಲ್ ಫುಕನ್ ಎಂಬಾತ ತನ್ನ ಐಷಾರಾಮಿ ಜೀವನಶೈಲಿಯ ಮೂಲಕ ಜನರನ್ನು ಆಕರ್ಷಿಸುತ್ತಿದ್ದನು. ತನ್ನಲ್ಲಿ ಹೂಡಿಕೆ ಮಾಡಿದರೆ, 60 ದಿನದಲ್ಲಿ 30%ಗೂ ಅಧಿಕ ಲಾಭ ತಂದುಕೊಡುವ ಭರವಸೆ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ.