ಕಳೆದ ಎರಡು ದಿನಗಳಲ್ಲಿ ಸುಮಾರು 272 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿ ಬಿಂದುವಿನ ಮೂಲಕ ಭಾರತವನ್ನು ತೊರೆದಿದ್ದಾರೆ. 12 ರೀತಿಯ ವೀಸಾ ರದ್ದು ಮಾಡಿರುವ ಕಾರಣದಿಂದಾಗಿ ಭಾನುವಾರ ಇನ್ನೂ ಹಲವು ಮಂದಿ ಪಾಕಿಸ್ತಾನಕ್ಕೆ ವಾಪಸ್ ಹೋಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ 13 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 629 ಭಾರತೀಯರು ಪಂಜಾಬ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು 28 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಇದಾದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ಇನ್ನಷ್ಟೂ ಹೆಚ್ಚಾಗಿದೆ. ಪಾಕಿಸ್ತಾನದ ಪ್ರಜೆಗಳು ಭಾರತ ಬಿಟ್ಟು ಹೋಗಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಕಾಶ್ಮೀರದ ಪಕ್ಷಗಳು, ಸಂಘಟನೆಗಳಿಂದ ಖಂಡನೆ; ಸಂವೇದನೆ ಮರೆತ ಮಾಧ್ಯಮಗಳು
ಇನ್ನು ಈಗಾಗಲೇ ಹಲವು ರೀತಿಯ ವೀಸಾಗಳನ್ನು ರದ್ದುಗೊಳಿಸಲಾಗಿದೆ. ಸಾರ್ಕ್ ವೀಸಾ ಇರುವವರು ಏಪ್ರಿಲ್ 26ಕ್ಕೂ ಮುನ್ನ ದೇಶ ಬಿಟ್ಟು ಹೋಗಬೇಕು. ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ನೀಡಲಾಗುವ ಆಗಮನ ವೀಸಾ, ವ್ಯವಹಾರ, ಚಲನಚಿತ್ರ, ಪತ್ರಕರ್ತ, ಸಾರಿಗೆ, ಸಮ್ಮೇಳನ, ಪರ್ವತಾರೋಹಣ, ವಿದ್ಯಾರ್ಥಿ, ಸಂದರ್ಶಕ, ಯಾತ್ರಿಕ, ಗುಂಪು ಪ್ರವಾಸಿ ಮತ್ತು ಗುಂಪು ಯಾತ್ರಿಕ ವೀಸಾಗಳನ್ನು ಹೊಂದಿರುವವರು ಏಪ್ರಿಲ್ 27ರ ಒಳಗಾಗಿ ದೇಶದಿಂದ ಹೊರಹೋಗಬೇಕು.
ವೈದ್ಯಕೀಯ ವೀಸಾಗಳನ್ನು ಹೊಂದಿರುವವರು ಏಪ್ರಿಲ್ 29ರ ಒಳಗಾಗಿ ದೇಶ ತೊರೆಯಬೇಕು. ಈ ಆದೇಶ ಹೊರಡಿಸಿದಾಗಿನಿಂದ ಯಾವುದೇ ಪಾಕಿಸ್ತಾನದ ಪ್ರಜೆಗಳಿಗೆ ಹೊಸದಾಗಿ ವೀಸಾವನ್ನು ನೀಡಲಾಗುವುದಿಲ್ಲ. ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗುವ ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳು ಸದ್ಯಕ್ಕೆ ಮಾನ್ಯವಾಗಿರುತ್ತವೆ.
ಅಧಿಕಾರಿಗಳ ಪ್ರಕಾರ, ಏಪ್ರಿಲ್ 25ರಂದು 191 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತವನ್ನು ತೊರೆದಿದ್ದಾರೆ. ಏಪ್ರಿಲ್ 26ರಂದು 81 ಜನರು ನಿರ್ಗಮಿಸಿದ್ದಾರೆ. ಏಪ್ರಿಲ್ 25ರಂದು ಪಾಕಿಸ್ತಾನದಿಂದ ಸುಮಾರು 287 ಭಾರತೀಯರು ವಾಪಸ್ ಬಂದಿದ್ದಾರೆ. 13 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು 342 ಭಾರತೀಯರು ಏಪ್ರಿಲ್ 26ರಂದು ಪಾಕಿಸ್ತಾನದಿಂದ ಅಟ್ಟಾರಿ-ವಾಘಾ ಗಡಿಯ ಮೂಲಕ ಮರಳಿದ್ದಾರೆ.
