ಕೇರಳದ ಪಶುವೈದ್ಯಕೀಯ ವಿದ್ಯಾರ್ಥಿಯೊಬ್ಬರು ತನ್ನ ಹಾಸ್ಟೆಲ್ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಆತನ ಆತ್ಮಹತ್ಯೆಗೂ ಮೊದಲು ಹಿರಿಯ ಮತ್ತು ಸಹಪಾಠಿಗಳು 29 ಗಂಟೆಗಳ ಕಾಲ ಆತನಿಗೆ ಚಿತ್ರಿಹಿಂಸೆ ನೀಡಿದ್ದಾರೆ. ಮನವೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಿಬಿಐ ಪೊಲೀಸರು ತಿಳಿಸಿದ್ದಾರೆ.
20 ವರ್ಷದ ಜೆ.ಎಸ್ ಸಿದ್ಧಾರ್ಥನ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಅವರು ಕೇರಳದ ವಯನಾಡ್ ಜಿಲ್ಲೆಯ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಕಾಲೇಜಿನಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು.
ಸಿದ್ದಾರ್ಥನ್ ಸಾವಿನ ಸಂಬಂಧ 20 ಜನರ ವಿರುದ್ಧ ಸಿಬಿಐ ಶುಕ್ರವಾರ ಎಫ್‌ಐಆರ್ ದಾಖಲಿಸಿದೆ. ಕ್ರಿಮಿನಲ್ ಪಿತೂರಿ, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕೇರಳ ರ್‍ಯಾಗಿಂಗ್ ನಿಷೇಧ ಕಾಯಿದೆಯ ನಿಬಂಧನೆಗಳ ಅಡಿ ಪ್ರಕರಣ ದಾಖಲಾಗಿದೆ.
“ಸಿದ್ಧಾರ್ಥನ್ ಅವರಿಗೆ ಹಿರಿಯರು ಮತ್ತು ಸಹಪಾಠಿಗಳು ‘ದೈಹಿಕ ಮತ್ತು ಮಾನಸಿಕ’ವಾಗಿ ಹಿಂಸಿದ್ದಾರೆ. ಇದರಿಂದಾಗಿ, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ವೈತಿರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಶೋಭ್ ಪಿ.ವಿ ಹೇಳಿದ್ದಾರೆ.
“ಫೆಬ್ರವರಿ 16 ರಂದು ಬೆಳಿಗ್ಗೆ 9 ಗಂಟೆಯಿಂದ ಫೆಬ್ರವರಿ 17ರ ಮಧ್ಯಾಹ್ನ 2 ಗಂಟೆವರೆಗೆ ನಿರಂತರವಾಗಿ ಸಿದ್ದಾರ್ಥನ್ ಮೇಲೆ ಕೈ ಮತ್ತು ಬೆಲ್ಟ್‌ನಿಂದ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕ್ರೂರವಾಗಿ ರ್‍ಯಾಗಿಂಗ್ ಮಾಡಿದ್ದಾರೆ. ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಆತ, ಆತ್ಮಹತ್ಯೆ ಬಿಟ್ಟು ಬೇರೆ ದಾರಿ ಇಲ್ಲವೆಂದು ಭಾವಿಸಿ ಫೆ.18ರಂದು ಹಾಸ್ಟೆಲ್‌ನ ಬಾತ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ವರದಿ ತಿಳಿಸಿದೆ.
“ಪೊಲೀಸರು ಆರಂಭದಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆದರೆ, ಇದುವರೆಗೆ ನಡೆಸಲಾದ ತನಿಖೆಯಲ್ಲಿ, ಕಾಲೇಜಿನ ಡೀನ್ ಹೇಳಿಕೆ, ವೈದ್ಯಕೀಯ ಪರೀಕ್ಷಾ ವರದಿ ಹಾಗೂ ಕಾಲೇಜಿನ ಆಂಟಿ-ರ್‍ಯಾಗಿಂಗ್ ಸ್ಕ್ವಾಡ್ ನೀಡಿದ ವರದಿಯಿಂದ ಆತನಿಗೆ ಚಿತ್ರಹಿಂಸೆ ನೀಡಿರುವುದು ತಿಳಿದುಬಂದಿದೆ” ಎಂದು ಸಿಬಿಐ ಹೇಳಿದೆ.
“ಆರಂಭದಲ್ಲಿ, ಮತ್ತೊಬ್ಬ ಎರಡನೇ ವರ್ಷದ ವಿದ್ಯಾರ್ಥಿ ಕ್ರಿಶನ್‌ಲಾಲ್ ಹೇಳಿಕೆಯ ಆಧಾರದ ಮೇಲೆ ಸಿಆರ್‌ಪಿಸಿ ಸೆಕ್ಷನ್ 174 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ಎಸ್‌ಐ ಪ್ರಶೋಭ್ ಅವರು ಹೊಸ ಸೆಕ್ಷನ್‌ಗಳನ್ನು ಸೇರಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ, ಐಪಿಸಿ ಸೆಕ್ಷನ್ 120 (ಅಪರಾಧದ ಪಿತೂರಿ), 306 (ಆತ್ಮಹತ್ಯೆಗೆ ಪ್ರಚೋದನೆ), 323 (ನೋವು ಉಂಟುಮಾಡುವುದು), 342 (ಅಕ್ರಮ ಬಂಧನ), 506 (ಬೆದರಿಕೆ), 355 (ದಾಳಿ) ಮತ್ತು ಕೇರಳ ರ್‍ಯಾಗಿಂಗ್ ನಿಷೇಧ ಕಾಯಿದೆಯ ಸೆಕ್ಷನ್ 4 ಮತ್ತು 3ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಸಿಬಿಐ ತಿಳಿಸಿದೆ.