ಮಣಿಪುರದ ಕೆಲವು ತಿಂಗಳುಗಳ ಕಾಲ ಕೊಂಚ ಕಡಿಮೆಯಾಗಿದ್ದ ಹಿಂಸಾಚಾರವು ಲೋಕಸಭೆ ಚುನಾವಣೆ ಆರಂಭವಾಗುತ್ತಿದ್ದಂತೆ ಮತ್ತೆ ಪುಟಿದೆದ್ದಿದ್ದು, 3 ಬಾರಿ ಸ್ಫೋಟ ಸಂಭವಿಸಿ ಸೇತುವೆಗೆ ಹಾನಿ ಉಂಟಾಗಿದೆ.
ಹೊರ ಮಣಿಪುರದ ಕೆಲವು ಭಾಗಗಳಲ್ಲಿ ಎರಡನೇ ಹಂತದ ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಮಂಗಳವಾರ ಮತ್ತು ಬುಧವಾರದ ಮಧ್ಯರಾತ್ರಿಯ ಸ್ಪೋಟ ಸಂಭವಿಸಿದೆ. ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂರು ಮಧ್ಯಮ ತೀವ್ರತೆಯ ಸ್ಫೋಟವಾಗಿದ್ದು ಸೇತುವೆಗೆ ಹಾನಿಯಾಗಿದೆ.
ಸ್ಫೋಟದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಈ ಸ್ಪೋಟವು ಇಂಫಾಲ್‌ನಿಂದ ನಾಗಾಲ್ಯಾಂಡ್‌ನ ದಿಮಾಪುರ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-2 ರ ಸಂಚಾರದ ಮೇಲೆ ಪ್ರಭಾವ ಬೀರಿದೆ.
ಇದನ್ನು ಓದಿದ್ದೀರಾ? ಮಣಿಪುರ| ಇವಿಎಂ ನಾಶ; ಏ. 22ರಂದು 11 ಮತಗಟ್ಟೆಗಳಲ್ಲಿ ಮರು ಮತದಾನ
ಈ ಘಟನೆಯು ಕಾಂಗ್‌ಪೋಕ್ಪಿ ಜಿಲ್ಲೆಯ ಸಪೋರ್ಮಿನಾ ಸಮೀಪ 1:15 ರ ಸುಮಾರಿಗೆ ನಡೆದಿದೆ. ಘಟನೆಯ ಹೊಣೆಯನ್ನು ಯಾವುದೇ ಗುಂಪು ಇನ್ನೂ ಹೊತ್ತುಕೊಂಡಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದು, ಹತ್ತಿರದ ಪ್ರದೇಶಗಳು ಮತ್ತು ಇತರ ಸೇತುವೆಗಳನ್ನು ಶೋಧಿಸಿ ಪರಿಶೀಲಿಸಲಾಗುತ್ತಿದೆ.
ಏಪ್ರಿಲ್ 19 ರಂದು ಮಣಿಪುರದಲ್ಲಿ ಮೊದಲ ಹಂತದ ಮತದಾನದ ವೇಳೆ, ಗುಂಡಿನ ದಾಳಿ, ಇವಿಎಂ ನಾಶ, ಬೆದರಿಕೆಯಂತಹ ಘಟನೆಗಳು ನಡೆದಿದೆ. ಒಳ ಮಣಿಪುರ ಕ್ಷೇತ್ರದ ಕೆಲವು ಭಾಗಗಳಲ್ಲಿ ಬೆದರಿಕೆ ಹಾಕಿದ, ದಬ್ಬಾಳಿಕೆ ನಡೆಸಿದ ಆರೋಪಗಳು ಕೂಡಾ ಇದೆ. ಇವಿಎಂ ನಾಶವಾದ ಕಾರಣ ಕ್ಷೇತ್ರದ 11 ಮತಗಟ್ಟೆಗಳಿಗೆ ಏಪ್ರಿಲ್ 22 ರಂದು ಮತ್ತೆ ಚುನಾವಣೆ ನಡೆದಿದೆ. ಶಾಂತಿಯುತವಾಗಿ ಚುನಾವಣೆ ನಡೆದಿದ್ದು ಶೇಕಡ 80ಕ್ಕಿಂತ ಅಧಿಕ ಮತದಾನವಾಗಿದೆ.
ಇದನ್ನು ಓದಿದ್ದೀರಾ? ಮಣಿಪುರ| 47 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಕಾಂಗ್ರೆಸ್ ಒತ್ತಾಯ
ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಮಣಿಪುರದ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ರಮಾನಂದ ನೊಂಗ್‌ಮೈಕಪಮ್ ಅವರು ಗುಂಪು ಹಿಂಸಾಚಾರ ಮತ್ತು ಬೂತ್ ವಶಪಡಿಸಿಕೊಂಡ ಘಟನೆಗಳು, ಇವಿಎಂ ನಾಶಗೈದ ಘಟನೆಗಳನ್ನು ತಿಳಿಸಿದ್ದು, ಆ ಬಳಿಕ ಮರು ಮತದಾನ ನಡೆದಿದೆ.
ಅಂದಿನಿಂದ, ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಯ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿಗಳೂ ನಡೆಯುತ್ತಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಗ್ರಾಮಸ್ಥರ ಗುಂಪು ಕಾಂಗ್‌ಪೂಕ್ಪಿ ಜಿಲ್ಲೆಯ ಬೆಟ್ಟಗಳಿಂದ ಇಳಿದಿದೆ. ಹಾಗೆಯೇ ಅವಾಂಗ್ ಸೆಕ್ಮೈ ಮತ್ತು ನೆರೆಯ ಲುವಾಂಗ್‌ಸಂಗೋಲ್ ಗ್ರಾಮಗಳಲ್ಲಿ ಭಾರೀ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.