ದೇಶದಲ್ಲಿ ಹುಸಿ ಬಾಂಬ್ ಬೆದರಿಕೆ ಕರೆಗಳ ಪ್ರಮಾಣ ಅಧಿಕವಾಗುತ್ತಿದೆ. 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರು ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಒಂದು ವಾರದಲ್ಲೇ ಬರೋಬ್ಬರಿ 35 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದೆ ಎಂದು ವರದಿಯಾಗಿದೆ.
ನಿನ್ನೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆ ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರಾ ವಿಮಾನವನ್ನು ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ತಿರುಗಿಸಲಾಗಿದೆ. ಜೈಪುರ- ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೂ ಬಾಂಬ್ ಬೆದರಿಕೆ ಬಂದಿದ್ದು, ಪರಿಶೀಲಿಸಿದಾಗ ಅದು ನಕಲಿ ಎಂಬುದು ಸಾಬೀತಾಗಿದೆ. ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ಆಕಾಶ ಏರ್ ವಿಮಾನವು ಹೊರಡುವ ಮುನ್ನ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಬಾಂಬ್ ಬೆದರಿಕೆ ಕರೆ ಬಂದ ಕಾರಣ ಜೈಪುರ-ದುಬೈ ವಿಮಾನವನ್ನು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವುದು ವಿಳಂಬವಾಯಿತು. ಇಂದು ಬೆಳಗ್ಗೆ 6:10ಕ್ಕೆ ಟೇಕ್-ಆಫ್ ಆಗಬೇಕಿದ್ದ ವಿಮಾನ 7:45ಕ್ಕೆ ದುಬೈಗೆ ತೆರಳಿದೆ. ದೆಹಲಿಯಿಂದ ಲಂಡನ್‌ಗೆ ಹಾರಬೇಕಾಗಿದ್ದ ವಿಸ್ತಾರಾ ವಿಮಾನವು ಫ್ರಾಂಕ್‌ಫರ್ಟ್‌ನಲ್ಲಿ ಲ್ಯಾಂಡ್ ಆಗಿ ಬಳಿಕ ಲಂಡನ್‌ಗೆ ಹಾರಿದೆ.
ಇದನ್ನು ಓದಿದ್ದೀರಾ? ಸಾಮಾಜಿಕ ಜಾಲತಾಣದ ಮೂಲಕ ನಾಲ್ಕು ವಿಮಾನಗಳಿಗೆ ಬಾಂಬ್ ಬೆದರಿಕೆ
ಸೋಮವಾರದಿಂದ ಈವರೆಗೆ ಕನಿಷ್ಠ 35 ವಿಮಾನಗಳಿಗೆ ಇಂತಹ ಬಾಂಬ್ ಬೆದರಿಕೆ ಕರೆ/ ಸಂದೇಶಗಳು ಬಂದಿದೆ. ಈ ನಿಟ್ಟಿನಲ್ಲಿ ಈ ನಕಲಿ ಬಾಂಬ್ ಬೆದರಿಕೆ ಹಾಕುವವರ ವಿರುದ್ದ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ನಕಲಿ ಬಾಂಬ್ ಬೆದರಿಕೆಗಳಿಂದಾಗಿ ಆಗಿರುವ ನಷ್ಟವನ್ನು ಆರೋಪಿಗಳಿಂದಲೇ ವಸೂಲಿ ಮಾಡಬೇಕು ಎಂದು ವಿಮಾನಯಾನ ಸಂಸ್ಥೆಗಳು ಆಗ್ರಹಿಸಿದೆ.
ಇನ್ನು ಬಹುತೇಕ ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಅಪ್ರಾಪ್ತರು ಅಥವಾ ಪ್ರಾಂಕ್‌ಸ್ಟರ್‌ಗಳು ಮಾಡಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.
