3 ಈಡಿಯಟ್ಸ್ ಖ್ಯಾತಿಯ ಹಿರಿಯ ನಟ ಅಚ್ಯುತ್ ಪೋತರ್ ಅವರು ಆಗಸ್ಟ್ 18ರಂದು ನಿಧನರಾಗಿದ್ದಾರೆ. ಹಲವು ಬಾಲಿವುಡ್ ಸಿನಿಮಾಗಳಲ್ಲಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿರುವ ಪೋತರ್ ಅವರಿಗೆ 91 ವರ್ಷ ವಯಸ್ಸಾಗಿತ್ತು.
ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಥಾಣೆಯ ಜುಪಿಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಅಂತಿಮ ವಿಧಿವಿಧಾನಗಳನ್ನು ಇಂದು(ಆಗಸ್ಟ್ 19) ಥಾಣೆಯಲ್ಲಿ ನಡೆಸಲಾಗುತ್ತದೆ. ವರ್ಷಗಳಲ್ಲಿ, ಅಚ್ಯುತ್ ಹಲವಾರು ಹಿಂದಿ ಮತ್ತು ಮರಾಠಿ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳು ನಟ ಮದನ್ ಬಾಬ್ ನಿಧನ
3 ಈಡಿಯಟ್ಸ್, ಅರ್ಧ್ ಸತ್ಯ, ಯೇ ದಿಲ್ಲಗಿ ಮುಂತಾದ ಚಲನಚಿತ್ರಗಳ ಜೊತೆಗೆ, ಅವರು ವಾಗ್ಲೆ ಕಿ ದುನಿಯಾ, ಮಜ್ಹಾ ಹೋಶಿಲ್ ನಾ, ಮಿಸ್ ತೆಂಡೂಲ್ಕರ್, ಭಾರತ್ ಕಿ ಖೋಜ್ ಸೇರಿದಂತೆ ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದರು.
ಅಚ್ಯುತ ಪೋತರ್ ತಮ್ಮ 44ನೇ ವಯಸ್ಸಿನಲ್ಲಿ ಸಿನಿಮಾ ಲೋಕಕ್ಕೆ ಪ್ರವೇಶಿಸಿದರು. ಪೋತರ್ ಯಾವುದೇ ತರಬೇತಿ ಪಡೆದ ನಟರಲ್ಲ. ಪದವಿ ಪಡೆದ ನಂತರ ಅವರು ಮೊದಲು ಮಧ್ಯಪ್ರದೇಶದ ರೇವಾದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಅದಾದ ಬಳಿಕ ಮದುವೆಯ ಒಂದು ವರ್ಷದೊಳಗೆ ಭಾರತೀಯ ಸೇನೆಗೆ ಸೇರಿದರು.
ಅವರ ಅಧಿಕಾರಾವಧಿ ಮುಗಿದ ನಂತರ, 1967ರಲ್ಲಿ ಕ್ಯಾಪ್ಟನ್ ಹುದ್ದೆಯಿಂದ ನಿವೃತ್ತರಾದರು. ನಂತರ ಅವರು ಇಂಡಿಯನ್ ಆಯಿಲ್‌ನಲ್ಲಿ ಕಾರ್ಯನಿರ್ವಾಹಕರಾಗಿ 25 ವರ್ಷಗಳ ಕಾಲ ಕೆಲಸ ಮಾಡಿದರು. 1992ರಲ್ಲಿ 58ನೇ ವಯಸ್ಸಿನಲ್ಲಿ ನಿವೃತ್ತರಾದರು.
ಇಂಡಿಯನ್ ಆಯಿಲ್‌ನಲ್ಲಿದ್ದಾಗ, ಪೋತರ್ ನಾಟಕಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅದರಿಂದಾಗಿ ನಟನೆಯ ಉತ್ಸಾಹ ಹೆಚ್ಚಾಗಿ 1980ರಲ್ಲಿ ಹಿಂದಿ ಚಲನಚಿತ್ರ ಆಕ್ರೋಶ್‌ನೊಂದಿಗೆ ತಮ್ಮ ಚಲನಚಿತ್ರ ಜೀವನಕ್ಕೆ ಪಾದಾರ್ಪಣೆ ಮಾಡಿದರು.
