ಕೊಳವೆ ಬಾವಿಗೆ ಬಿದ್ದದ್ದ 3 ವರ್ಷದ ಬಾಲಕಿಯನ್ನು ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ. 9 ದಿನಗಳ ಕಾಲ ಆಹಾರ-ನೀರು ಇಲ್ಲದೆಯೇ ಬಾಲಕಿ ಜೀವ ಉಳಿಸಿಕೊಂಡು ಬದುಕಿ ಹೊರಬಂದಿದ್ದಾಳೆ.
ರಾಜಸ್ಥಾನದ ಕೊಟ್‌ಪುಟ್ಲಿ ಜಿಲ್ಲೆಯ ಸರುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಯಾಲಿ ಧಾನಿ ಎಂಬ ಗ್ರಾಮದಲ್ಲಿ 9 ದಿನಗಳ ಹಿಂದೆ (ಡಿ.23) ಬಾಲಕಿ ತೋಟದಲ್ಲಿ ಆಟವಾಡುವಾಗ 150 ಅಡಿ ಆಳದ ಕೊಳವೆ ಬಾವಿಗೆ ಬಿದಿದ್ದಳು. ಆಕೆಯನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಬಾಲಕಿಯನ್ನು ಆರಂಭದಲ್ಲಿ ರಿಂಗ್ ಸಹಾಯದಿಂದ ಹೊರತೆಗೆಯಲು ಪ್ರಯತ್ನಿಸಲಾಗಿತ್ತು. ಆದರೆ, ಆ ಪ್ರಯತ್ನ ವಿಫಲವಾಗಿತ್ತು. ಜಿಲ್ಲಾಡಳಿತವು ತಮ್ಮ ಮಗಳನ್ನು ರಕ್ಷಿಸುವಲ್ಲಿ ತ್ವರಿತ ಕಾರ್ಯಾಚರಣೆ ನಡೆಸಲು ನಿರ್ಲಕ್ಷ್ಯ ತೋರುತ್ತಿದೆ ಎಂದು ಆಲಕಿಯ ಪೋಷಕರು ಆರೋಪಿಸಿದ್ದರು. ಆದರೆ, ಕಾರ್ಯಾಚರಣೆ ಕಠಿಣವಾಗಿದೆ. ಎಲ್ಲ ರೀತಿಯಲ್ಲೂ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಕಾರ್ಯಾಚರಣೆ ಕಠಿಣವಾಗಿದ್ದರಿಂದ ರಕ್ಷಣಾ ತಂಡಗಳು ಕೊಳವೆ ಬಾವಿಗೆ ಸಮಾನಾಂತರ ಸುರಂಗ ಕೊರೆಯಲು ಆರಂಭಿಸಿದ್ದವು. ಇದೀಗ, ಸತತ 9 ದಿನಗಳ ಕಾರ್ಯಾಚರಣೆ ಬಳಿಕ, ಬಾಲಕಿಯನ್ನು ರಕ್ಷಿಸಲಾಗಿದೆ.
160 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ಬಾಲಕಿ ಜೀವಂತವಾಗಿದ್ದು, ಕುಟುಂಬಸ್ಥರನ್ನು ಸೇರಿಕೊಂಡಿದ್ದಾಳೆ.