ಭಾರತದಲ್ಲಿ 18 ವರ್ಷ ಪೂರೈಸುವುದಕ್ಕೂ ಮೊದಲೇ 30% ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂಬ ಆಘಾತಕಾರಿ ವರದಿ ಬೆಳಕಿಗೆ ಬಂದಿದೆ.
ಅಮೆರಿಕ ಮೂಲದ ವೈದ್ಯಕೀಯ ನಿಯತಕಾಲಿಕೆ ‘ದಿ ಲ್ಯಾನ್ಸೆಟ್ ಜರ್ನಲ್‘ ಬಿಡುಗಡೆ ಮಾಡಿರುವ ವರದಿಯಲ್ಲಿ, “2023ರಲ್ಲಿ ದೇಶದ ಹೆಣ್ಣುಮಕ್ಕಳ ಪೈಕಿ 30% ಬಾಲಕಿಯರು ಮತ್ತು 13% ಬಾಲಕರು 18 ವರ್ಷಪೂರೈಸುವುದಕ್ಕೂ ಮೊದಲೇ ಲೈಂಗಿಕ ಕಿರುಕುಳಗಳಿಗೆ ತುತ್ತಾಗಿದ್ದಾರೆ” ಎಂದು ಹೇಳಲಾಗಿದೆ.
ಪತ್ರಿಕೆಯು 1990ರಿಂದ 2023ರ ಅವಧಿಯಲ್ಲಿ ಮಕ್ಕಳ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು 200ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ಲೇಷಣೆ ನಡೆಸಿದೆ. ಎಲ್ಲ ದೇಶಗಳ ಪ್ರಕರಣಗಳನ್ನೂ ಒಟ್ಟುಗೂಡಿಸಿದರೆ, ಪ್ರತಿ ಐವರು ಹೆಣ್ಣು ಮಕ್ಕಳಲ್ಲಿ ಒಬ್ಬರು ಮತ್ತು ಏಳು ಗಂಡು ಮಕ್ಕಳಲ್ಲಿ ಒಬ್ಬರು 18ನೇ ವರ್ಷಕ್ಕೆ ಕಾಲಿಡುವುದಕ್ಕೂ ಮೊದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬುದು ವಿಶ್ಲೇಷಣೆಯಲ್ಲಿ ಕಂಡುಬಂದಿದೆ ಎಂದು ಪತ್ರಿಕೆ ಹೇಳಿದೆ
ಆದಾಗ್ಯೂ, ಜಗತ್ತಿನಾದ್ಯಂತ ಎಲ್ಲ ಪ್ರಕರಣಗಳನ್ನು ಗಮನಿಸಿದರೆ, ದಕ್ಷಿಣ ಏಷ್ಯಾದಲ್ಲಿ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಭಾರತದಲ್ಲಿ 30% ಹೆಣ್ಣು ಮಕ್ಕಳು 18 ವರ್ಷ ಪೂರೈಸುವುದಕ್ಕೂ ಮುನ್ನವೇ ಲೈಂಗಿಕ ದೌರ್ಜನ್ಯ ಎದುರಿಸಿದ್ದರೆ, ನೆರೆಯ ಬಾಂಗ್ಲಾದೇಶದಲ್ಲಿ 9.3% ಹೆಣ್ಣು ಮಕ್ಕಳು ಇದೇ ಕಿರುಕುಳವನ್ನು ಅನುಭಿವಿಸಿದ್ದಾರೆ.
ಇನ್ನು, ಆಫ್ರಿಕಾ ರಾಷ್ಟ್ರಗಳಲ್ಲಿ 18 ವರ್ಷಕ್ಕಿಂತ ಒಳಪಟ್ಟ ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಕೋಟಿ ಡಿ’ಐವೋರ್ ದೇಶದಲ್ಲಿ 18 ವರ್ಷದೊಳಗಿನ 28% ಬಾಲಕರ ಮೇಲೆ ಲೈಂಗಿಕ ಕಿರುಕುಳ/ದೌರ್ಜನ್ಯಗಳು ನಡೆದಿವೆ ಎಂದು ಪತ್ರಿಕೆಯ ವರದಿ ತಿಳಿಸಿದೆ.