ಮಧ್ಯಪ್ರದೇಶದ ಇಂದೋರ್-ದೇವಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದ 40 ಗಂಟೆಗಳ ಸುದೀರ್ಘ ‘ಟ್ರಾಫಿಕ್ ಜಾಮ್’ನಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿ ‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ (NHAI) ಪರವಾಗಿ ವಾದ ಮಂಡಿಸಿರುವ ವಕೀಲರು ಅರ್ಜಿದಾರರನ್ನೇ ‘ನೀವು ಯಾಕೆ ಇಷ್ಟು ಬೇಗ ಮನೆಯಿಂದ ಹೊರಟಿರಿ’ ಎಂದು ಪ್ರಶ್ನಿಸಿ, ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಶುಕ್ರವಾರ ಸಂಭವಿಸಿದ 40 ಗಂಟೆಗಳ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಡಿದದ ವಕೀಲ ಆನಂದ್ ಅಧಿಕಾರಿ ಅವರು ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಇಂದೋರ್ ನ್ಯಾಯಾಲಯದ ನ್ಯಾಯಮೂರ್ತಿ ವಿವೇಕ್ ರೂಸಿಯಾ ಮತ್ತು ಬಿನೋದ್ ಕುಮಾರ್ ದ್ವಿವೇದಿ ಅವರನ್ನೊಳಗೊಂಡಿದ್ದ ನ್ಯಾಯಪೀಠ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ, ವಾದ ಮಂಡಿಸಿದ NHAI ವಕೀಲರು, “ಕೆಲಸ ಇಲ್ಲದೆ ಮನೆಯಿಂದ ಯಾಕೆ ಹೊರಗೆ ಬರುತ್ತೀರಿ. ಯಾಕೆ ಅಷ್ಟು ಬೇಗ ಮನಿಯಿಂದ ಹೊರುತ್ತೀರಿ” ಎಂದು ಹೇಳಿದ್ದು, ನ್ಯಾಯಾಲಯದಲ್ಲಿ ನೆರೆದಿದ್ದವರನ್ನು ನಿಬ್ಬೆರಗುಗೊಳಿಸಿದ್ದಾರೆ.
ಅವರ ಪ್ರಶ್ನೆಯನ್ನು ಖಂಡಿಸಿದ ಅರ್ಜಿದಾರರ ಪರ ವಕೀಲ ಗಿರೀಶ್ ಪಟವರ್ಧನ್, “NHAI ಪರ ವಕೀಲರು ನ್ಯಾಯಾಲಯದಲ್ಲಿ ನಿಂತು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸಾರ್ವಜನಿಕರು ಮನೆಯಿಂದ ಹೊರ ಬರಲು ಸುರಕ್ಷತೆಯೇ ಇಲ್ಲ. ರಸ್ತೆಗಳು ಸುರಕ್ಷಿತವಾಗಿಲ್ಲ ಎಂಬುದನ್ನು ಅವರು ಧ್ವನಿಸುತ್ತಿದ್ದಾರೆ. ಇಂತಹ ಆಕ್ಷೇಪಾರ್ಹ ಹೇಳಿಕೆಗಳನ್ನು ನ್ಯಾಯಾಲಯವು ಮಾನ್ಯ ಮಾಡಿಲ್ಲ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ: ‘ಎನ್‌ಆರ್‌ಸಿ’ಗಿಂತಲೂ ಹೆಚ್ಚು ಅಪಾಯಕಾರಿ
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಇದೇ ಹೆದ್ದಾರಿಯ ತಿರುವು ರಸ್ತೆ ನಿರ್ಮಾಣ ಕಾಮಗಾರಿಯನ್ನು 4 ವಾರಗಳೊಳಗೆ ಪೂರ್ಣಗೊಳಿಸಿ, ಸಂಚಾರಕ್ಕೆ ತೆರೆಯಬೇಕು ಎಂದು ನ್ಯಾಯಾಲಯವು ನೀಡಿದ್ದ ಆದೇಶವನ್ನೂ ವಕೀಲರು ಕೋರ್ಟ್ ಗಮನಕ್ಕೆ ತಂದರು.ನ್ಯಾಯಾಲಯದ ಆದೇಶದ ಹೊರತಾಗಿಯೂ ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.
ಅರ್ಜಿದಾರರ ಪರ ವಾಕೀಲರ ವಾದ ಆಲಿಸಿದ ನ್ಯಾಯಾಲಯವು, “ಇಂತಹ ವಿಳಂಬಗಳ ಹಿಂದಿರುವ ತರ್ಕವೇನು” ಎಂದು ಎನ್‌ಎಚ್‌ಎಐಅನ್ನು ಪ್ರಶ್ನಿಸಿತು. ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು. ಪ್ರತಿವಾದಿಗಳು ತಮ್ಮ ಉತ್ತರವನ್ನು ಲಿಖಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿತು.