ಸುರಿಯುವ ಮಳೆಯ ನಡುವೆ ಬೂದು ಬಣ್ಣದ ಹೂಡಿ ಧರಿಸಿದ್ದ ಯುವತಿಯೊಬ್ಬಳು ತನ್ನ ಎರಡು ಕೈಗಳನ್ನು ಚಾಚಿ ಪೊಲೀಸ್ ವಾಹನವೊಂದರ ಎದುರು ನಿಂತು, ಅದನ್ನು ಮುಂದಕ್ಕೆ ಹೋಗಲು ಬಿಡದೆ ತಡೆದಿದ್ದಾಳೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಬುಧವಾರ ಮುಂಬೈನಲ್ಲಿ ನಡೆದ ಆಂದೋಲನದಲ್ಲಿ ವಶಕ್ಕೆ ಪಡೆಯಲಾಗಿದ್ದ ಪ್ರತಿಭಟನಾಕಾರರು ಆ ಪೊಲೀಸ್ ವಾಹನದಲ್ಲಿದ್ದರು.
ಪೊಲೀಸ್ ವ್ಯಾನ್ ತಡೆದು ನಿಂತ ಈ ಯುವತಿಯನ್ನು ರಿಯಾ ಆಹಿರ್ ಎಂದು ಗುರುತಿಸಲಾಗಿದೆ. ಆಕೆ ಸತತ 40 ನಿಮಿಷಗಳ ಕಾಲ ಆ ವಾಹನದ ಎದುರು ಕದಲದೆ ನಿಂತಿದ್ದಳು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತನ್ನ ಸ್ನೇಹಿತರಿಗಾಗಿ ಕಾಯುತ್ತಿದ್ದಾಗ, ವಶಕ್ಕೆ ಪಡೆದ ಪ್ರತಿಭಟನಾಕಾರರನ್ನು ಕೊಂಡೊಯ್ಯುತ್ತಿದ್ದ ಪೊಲೀಸ್ ವಾಹನ ಆಕೆಯ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಪೊಲೀಸರ ಬಳಿ ತೆರಳಿದ ಆಕೆ, ಇವರನ್ನು ವಶಕ್ಕೆ ಪಡೆಯಲು ಅಗತ್ಯವಿರುವ ದಾಖಲೆಗಳಿವೆಯೇ ಎಂದು ಪ್ರಶ್ನಿಸಿದ್ದಾಳೆ. ಪೊಲೀಸರ ಪ್ರತಿಕ್ರಿಯೆಯಿಂದ ಅಸಮಾಧಾನಗೊಂಡ ಆಕೆ, ಮೊದಲು ಚಲಿಸುತ್ತಿದ್ದ ವಾಹನದ ಜೊತೆಗೇ ಹೆಜ್ಜೆ ಹಾಕಿದ್ದಾಳೆ. ವೇಗಕ್ಕೆ ಹೆಜ್ಜೆ ಹಾಕಲಾಗದಿದ್ದಾಗ ನೇರವಾಗಿ ವಾಹನದ ಎದುರೇ ಹೋಗಿ ನಿಂತಿದ್ದಾಳೆ.
“ಚಾಲಕ ವಾಹನದ ವೇಗವನ್ನು ಹೆಚ್ಚಿಸಲು ಯತ್ನಿಸಿದ,” ಎಂದು ನೆನಪಿಸಿಕೊಳ್ಳುವ ರಿಯಾ, ಆ ಕ್ಷಣದಲ್ಲಿ ತನ್ನನ್ನೂ ಬಂಧಿಸಬಹುದು ಅಥವಾ ಗಾಯಗೊಳ್ಳಬಹುದು ಎಂಬ ಆತಂಕ ಕಾಡಿತ್ತು ಎಂದಿದ್ದಾಳೆ. ಆದರೆ ಒಳಗಿದ್ದವರನ್ನು ಬಿಡುಗಡೆ ಮಾಡುವವರೆಗೂ ಕದಲುವುದಿಲ್ಲ ಎಂದು ಆಕೆ ಪಟ್ಟು ಹಿಡಿದಿದ್ದಾಳೆ. “ನನಗೆ ಒಂದೇ ವಿಚಾರ ಗೊತ್ತಿತ್ತು, ನಾನಿದನ್ನು ಶುರುಮಾಡಿದ್ದೇನೆಂದರೆ ನಾನೇ ಇದನ್ನು ಅಂತ್ಯಗೊಳಿಸಬೇಕು” ಎನ್ನುತ್ತಾರೆ ಅವರು.
“ಅವರು ವಾಹನದ ವೇಗ ಹೆಚ್ಚಿಸಿ ನನ್ನನ್ನು ಹೆದರಿಸಲು ಯತ್ನಿಸಿದರು, ಆದರೆ ನಾನು ಹಿಂದೆ ಸರಿಯಲಿಲ್ಲ. ಒಂದು ವೇಳೆ ನಾನಿದನ್ನು ಮಾಡದಿದ್ದರೆ, ಏನೂ ಮಾಡಲಿಲ್ಲವಲ್ಲ ಎಂಬ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು,” ಎಂದು 27 ವರ್ಷದ ರಿಯಾ ಹೇಳಿದ್ದಾರೆ. “ನಾನು ವಿದ್ಯಾರ್ಥಿಯಲ್ಲ, ನನ್ನ ತಂದೆ ರೈತರಲ್ಲ. ನಾನು ದಲಿತ ಅಥವಾ ಒಬಿಸಿ ಸಮುದಾಯಕ್ಕೂ ಸೇರಿದವಳಲ್ಲ. ಆದರೆ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಮಾಡಿದ್ದು ತಪ್ಪು. ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲೇಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಅಕ್ರಮಗಳ ಆಚೆಗೂ ವ್ಯವಸ್ಥೆಯ ವೈಫಲ್ಯಗಳ ಕುರಿತು ಆಕೆ ಕಳವಳ ವ್ಯಕ್ತಪಡಿಸಿದ್ದಾರೆ. “ವ್ಯವಸ್ಥೆ ನಮ್ಮೆಲ್ಲರನ್ನೂ ಹಲವು ರೀತಿಯಲ್ಲಿ ಕೈಬಿಟ್ಟಿದೆ. ಇದು ಹಿರಿಯ ನಾಗರಿಕರಿಂದ ಹಿಡಿದು ಬಿಡಿಗಾಸಿಗೆ ನಗರವನ್ನು ಸ್ವಚ್ಛಗೊಳಿಸುವ ದಲಿತ ಪೌರಕಾರ್ಮಿಕರವರೆಗಿನ ಎಲ್ಲ ಶೋಷಿತರ ಕುರಿತಾದ ವಿಚಾರ,” ಎಂದಿದ್ದಾರೆ. “ನಾವು ಧ್ವನಿ ಎತ್ತಲು ಹೆದರುವುದಿಲ್ಲ, ಅವರು ನಿರ್ಲಕ್ಷಿಸಲಾಗದಂತಹ ಅಲೆಯೊಂದನ್ನು ನಾವು ಸೃಷ್ಟಿಸಬೇಕಿದೆ,” ಎಂದು ಯುವಜನತೆಯ ಪರವಾಗಿ ದನಿ ಎತ್ತಿದ್ದಾರೆ.
‘ಭಯದ ಆಚೆಗೂ ಗೆಲುವಿದೆ’ ಎಂಬ ಮಾತು ನಿಜವೇ ಎಂಬುದನ್ನು ಪರೀಕ್ಷಿಸಲು, ತನ್ನ ಧೈರ್ಯದ ಒರೆಗಲ್ಲಿಗಾಗಿ ತಾನು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಆಕೆ ವಿವರಿಸಿದ್ದಾರೆ. ರಾತ್ರಿ ಮನೆಗೆ ಮರಳಿದಾಗ ತನಗೆ ಭಯವಾಗಿತ್ತು ಹಾಗೂ ಮುಂಜಾನೆ 5:30ರವರೆಗೂ ನಿದ್ದೆ ಬಂದಿರಲಿಲ್ಲ ಎಂದು ರಿಯಾ ಒಪ್ಪಿಕೊಂಡಿದ್ದಾಳೆ. ಆದರೆ, “ಪೊಲೀಸರು ಬರಬಹುದು ಎಂದು ಮನೆಯಲ್ಲಿ ಹೇಳಿದಾಗ, ‘ಅದಕ್ಕೇನಂತೆ? ನಾವದನ್ನು ಎದುರಿಸೋಣ’ ಎಂದು ನನ್ನ ಕುಟುಂಬ ಹೇಳಿತು. ಇಂತಹ ಬೆಂಬಲ ಸಿಕ್ಕಾಗ ಯಾವುದೇ ಪರಿಸ್ಥಿತಿ ಎದುರಿಸುವ ಧೈರ್ಯ ಬರುತ್ತದೆ,” ಎಂದಿದ್ದಾಳೆ.
ಮಳೆಯ ನಡುವೆ ರಿಯಾ ಆಹಿರ್ ವ್ಯಾನ್ ತಡೆದು ನಿಂತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ರಿಯಾ ವೃತ್ತಿಯಲ್ಲಿ ನಟಿ, ರೂಪದರ್ಶಿ (ಮಾಡೆಲ್) ಮತ್ತು ಉದ್ಯಮಿಯಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ‘ದಿಲ್‌ಬರ’ ಸೇರಿದಂತೆ ಹಲವು ಮ್ಯೂಸಿಕ್ ವಿಡಿಯೊಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.
ದೆಹಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಮತ್ತು ಪರೀಕ್ಷಾ ಅಕ್ರಮ ಖಂಡಿಸಿ ಮುಂಬೈನಾದ್ಯಂತ ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿಗಳಿಂದ ಬುಧವಾರ ಸತತ ಮೂರನೇ ದಿನವೂ ಪ್ರತಿಭಟನೆಗಳು ನಡೆದಿವೆ. ಮುಂಬೈ ಪೊಲೀಸರ ಮಾಹಿತಿ ಪ್ರಕಾರ, ಜುಲೈ 18ರಿಂದ ಈವರೆಗೆ 13 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಅಕ್ರಮ ಗುಂಪುಗಾರಿಕೆ ಆರೋಪದಡಿ 400ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನಲ್ಲಿ ಜುಲೈ 23 ರಿಂದ ಆಗಸ್ಟ್ 6ರವರೆಗೆ ಐದು ಅಥವಾ ಅದಕ್ಕಿಂತ ಹೆಚ್ಚು ಜನ ಸೇರದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.





