ಲಡಾಖ್‌ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಆರನೇ ಶೆಡ್ಯೂಲ್‌ನಡಿ ಸೇರ್ಪಡೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಗಳು ಬುಧವಾರ ಹಿಂಸಾತ್ಮಕವಾಗಿ ಬದಲಾಗಿದ್ದು, ಕನಿಷ್ಠ ಐವರು ಸಾವನ್ನಪ್ಪಿ, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 10 ಮಂದಿಯ ಸ್ಥಿತಿ ಗಂಭೀರವಾಗಿದೆ. ಈ ಘಟನೆಯ ಬಳಿಕ ಲೇಹ್‌ನಲ್ಲಿ ಪೊಲೀಸ್ ಅಧಿಕಾರಿಗಳು ಕರ್ಫ್ಯೂ ಜಾರಿಗೊಳಿಸಿದ್ದು, ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪಿನ ಸಭೆಗೆ ನಿಷೇಧ ಹೇರಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದ್ದು, ಒಂದು ವಾಹನವನ್ನೂ ಸುಟ್ಟುಹಾಕಲಾಗಿದೆ. ಹಿಂಸಾಚಾರವನ್ನು ತಡೆಯಲು ಪೊಲೀಸರು ಆಶ್ರುವಾಯು ಮತ್ತು ಲಾಠಿ ಚಾರ್ಜ್ ಮಾಡಿದ್ದಾರೆ. ಲೇಹ್ ಲಡಾಖ್‌ನ ಒಕ್ಕೂಟ ಪ್ರದೇಶದ ಆಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)2023ರ ಸೆಕ್ಷನ್ 163ರ ಅಡಿಯಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಲೇಹ್‌ನಲ್ಲಿ ಯಾವುದೇ ಪ್ರತಿಭಟನೆ, ರ‍್ಯಾಲಿ ಅಥವಾ ಮೆರವಣಿಗೆಗೆ ನಿಷೇಧ ವಿಧಿಸಲಾಗಿದೆ.
ಲೇಹ್ ಅಪೆಕ್ಸ್ ಬಾಡಿ (LAB) ಯುವ ಘಟಕದಿಂದ ಕರೆ ನೀಡಲಾಗಿದ್ದ ಈ ಆಂದೋಲನವು ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಶೆಡ್ಯೂಲ್‌ನಡಿ ಸೇರ್ಪಡೆಗೆ ಒತ್ತಾಯಿಸುವ ನಿರಂತರ ಅಭಿಯಾನದ ಭಾಗವಾಗಿತ್ತು. ಲಡಾಖ್ ಮೊದಲು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿತ್ತು. 2019ರ ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಂಡ ಬಳಿಕ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಕೇಂದ್ರದ ನೇರ ನಿಯಂತ್ರಣಕ್ಕೆ ಒಳಪಟ್ಟಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?
ಸೆಪ್ಟೆಂಬರ್ 10ರಿಂದ ಆರಂಭವಾದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ 15 ಜನರಲ್ಲಿ ಇಬ್ಬರ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಬೆಳವಣಿಗೆಯ ಬಳಿಕ ಒಂದು ದಿನದ ಬಂದ್‌ಗೆ ಕರೆ ನೀಡಲಾಗಿತ್ತು. ಹವಾಮಾನ ಕಾರ್ಯಕರ್ತ ಸೋನಂ ವಾಂಗ್ಚುಕ್ ತಮ್ಮ 15 ದಿನಗಳ ಉಪವಾಸವನ್ನು ಮಂಗಳವಾರ ಕೊನೆಗೊಳಿಸಿದ್ದು, ತಮ್ಮ ಬೆಂಬಲಿಗರಿಗೆ ಹಿಂಸೆಯಿಂದ ದೂರವಿರುವಂತೆ ಮನವಿ ಮಾಡಿದ್ದರು.
ಕೆಲವು ಯುವಕರು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪದಿಂದ ಉದ್ವಿಗ್ನತೆ ತಾರಕಕ್ಕೇರಿತು. ಬಳಿಕ ಪ್ರತಿಭಟನಾಕಾರರು ಲೇಹ್‌ನ ಬಿಜೆಪಿ ಕಚೇರಿಯ ಹೊರಗಡೆ ಭದ್ರತಾ ವಾಹನಕ್ಕೆ ಬೆಂಕಿ ಹಚ್ಚಿದರು. ಶಾಂತಿ ಸ್ಥಾಪನೆಗೆ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.