ಛತ್ತೀಸ್‌ಗಢದ ಕೋಬ್ರಾ ಜಿಲ್ಲೆಯ ತ್ವರಿತ ವಿಶೇಷ ನ್ಯಾಯಾಲಯವೊಂದು ದಲಿತ ಸಮುದಾಯದ 16 ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆ ಹಾಗೂ ಆಕೆಯ 2 ಕುಟುಂಬಗಳನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮರಣ ದಂಡನೆ ವಿಧಿಸಿದೆ.
2021ರ ಜನವರಿ 29ರಂದು 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಆಕೆಯ ಮೃತದೇಹವನ್ನು ಕಾಡಿಗೆ ಎಸೆದಿದ್ದರು. ಅತ್ಯಾಚಾರದ ಬಗ್ಗೆ ದೂರು ದಾಖಲಿಸಿದ್ದ ಬಾಲಕಿಯ ಎರಡು ಕುಟುಂಬದ ಮೂವರು ಸದಸ್ಯರನ್ನು ಆರೋಪಿಗಳು ಹತ್ಯೆ ಮಾಡಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ನ್ಯಾಯಾಲಯ ಮತ್ತೊಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಮಮತಾ ಬೋಜ್‌ವಾನಿ ಅವರು ಶಾಂತಾರಾಮ್, ಅಬ್ದುಲ್ ಜಬ್ಬಾರ್, ಅನಿಲ್ ಕುಮಾರ್, ಪ್ರದೇಶ್ ರಾಮ್ ಹಾಗೂ ಆನಂದ್ ರಾಮ್ ಎಂಬುವವರಿಗೆ ಕೊಲೆ, ಅತ್ಯಾಚಾರ, ಎಸ್‌ಸಿಎಸ್‌ಟಿ ದೌರ್ಜನ್ಯ ಹಾಗೂ ಇತರ ಐಪಿಸಿ ಸೆಕ್ಷನ್ ಕಾಯ್ದೆಯಡಿ ಮರಣ ದಂಡನೆ ಶಿಕ್ಷೆ ವಿಧಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್
ಸರ್ಕಾರದ ಪರವಾಗಿ ವಿಶೇಷ ಅಭಿಯೋಜನ ಸುನಿಲ್ ಕುಮಾರ್ ಮಿಶ್ರಾ ಅವರು ವಾದ ಮಂಡಿಸಿದರು. ತೀರ್ಪನ್ನು ಜನವರಿ 17ರಂದು ನೀಡಲಾಗಿತ್ತಾದರೂ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಾಯಿತು. ಆರೋಪಿಗಳ ಅಮಾನವೀಯ, ಕ್ರೂರ ಕೃತ್ಯವು ಅತ್ಯಂತ ವಿಕೃತ ಹಾಗೂ ಹೇಡಿತನದ್ದಾಗಿದೆ ಎಂದು ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಲಯ ತಿಳಿಸಿದೆ.
ಜನವರಿ 29, 2021ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿ ಕ್ರೂರವಾಗಿ ಹತ್ಯೆ ಮಾಡಿ ಆಕೆಯ ಮೃತದೇಹವನ್ನು ಕಾಡಿಗೆ ಎಸೆಯಲಾಗಿತ್ತು. ಆರೋಪಿಗಳು ಸಂತ್ರಸ್ತೆಯ ತಂದೆ, ತಾಯಿ ಹಾಗೂ ಕುಟುಂಬಕ್ಕೆ ಸೇರಿದ 4 ವರ್ಷದ ಮಗುವನ್ನು ಕೊಲೆ ಮಾಡಿದ್ದರು.
ಆರೋಪಿಗಳಲ್ಲಿ ಒಬ್ಬನಾದ ಶಾಂತಾರಾಮ್ ಎಂಬಾತ ಸಂತ್ರಸ್ತೆಯನ್ನು ಎರಡನೆ ಮದುವೆಗೆ ಬಲವಂತಪಡಿಸಿದ್ದ. ವಿವಾಹಕ್ಕೆ ಬಾಲಕಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಾಗಿ ತನ್ನ ಐವರು ಸಹಚರರೊಂದಿಗೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ.