ಅಶ್ಲೀಲ ವಿಷಯ ಪ್ರದರ್ಶನ ಹಾಗೂ ಇತರೆ ಕಾನೂನುಗಳ ಉಲ್ಲಂಘನೆಗಾಗಿ ಕಳೆದ 2 ವರ್ಷಗಳಲ್ಲಿ ದೇಶದಲ್ಲಿ ಒಟ್ಟು 50 OTT ಪ್ಲಾಟ್‌ಫಾರ್ಮ್‌ಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಲೋಕಸಭೆಯಲ್ಲಿ ಸಂಸತ್ ಸದಸ್ಯ ರಾಜಾಭಾವು ಪರಾಗ್ ಪ್ರಕಾಶ್ ವಾಜೆ ಅವರು ಕೇಳಿದ ಪ್ರಶ್ನೆಗೆ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು ಲಿಖಿತ ಉತ್ತರದಲ್ಲಿ ಈ ಕುರಿತು ಅಧಿಕೃತ ಮಾಹಿತಿ ಒದಗಿಸಿದ್ದಾರೆ.
ಡಿಜಿಟಲ್ ಮಾಧ್ಯಮದಲ್ಲಿನ ಪ್ರಚಲಿತ ವಿದ್ಯಮಾನಗಳ ಪ್ರಕಾಶಕರು ಮತ್ತು ಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್ ಪ್ರಕಾಶಕರಿಗಾಗಿ ಸಾಂಸ್ಥಿಕ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರವು IT ಕಾಯ್ದೆ 2000ರ ಅಡಿಯಲ್ಲಿ ‘ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗದರ್ಶಿ ಸೂತ್ರಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021’ ಅನ್ನು 2021ರ ಫೆಬ್ರವರಿ 25ರಂದು ಅಧಿಸೂಚಿಸಿದೆ.
ಈ ನಿಯಮಗಳ ಭಾಗ-IIIರಡಿ ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ನೀತಿ ಸಂಹಿತೆಯನ್ನು ಒದಗಿಸಲಾಗಿದ್ದು, ಬಂದಿರುವ ದೂರುಗಳ ಆಧಾರದ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, IT ಕಾಯ್ದೆ, 2000ರ ಸೆಕ್ಷನ್ 79(3)(b) ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸಲು ಮಧ್ಯವರ್ತಿಗಳಿಗೆ ಅಧಿಸೂಚನೆ ನೀಡಲು ಅವಕಾಶ ಕಲ್ಪಿಸುತ್ತದೆ.
ಇದನ್ನೂ ಓದಿ: ಸುಪ್ರೀಂನಲ್ಲಿ NEET ಪ್ರತಿಭಟನೆ ಪ್ರಸ್ತಾಪ; ‘ನಮ್ಮ ಸಮಯ ವ್ಯರ್ಥ ಮಾಡಬೇಡಿ’ ಎಂದ CJI
ಅಶ್ಲೀಲ ವಿಷಯಗಳನ್ನು ಬಿತ್ತರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಐಟಿ ಕಾಯ್ದೆ, 2000: ಸೆಕ್ಷನ್ 67 ಮತ್ತು 67A, ಭಾರತೀಯ ನ್ಯಾಯ ಸಂಹಿತೆ (BNS): ಸೆಕ್ಷನ್ 294, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ, 1986: ಸೆಕ್ಷನ್ರಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.





