ಚಿಟಗುಪ್ಪ : ರಾಜ್ಯದ ಎಲ್ಲಾ ರೈತರ ಬ್ಯಾಂಕ್ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಬೇಕು ಹಾಗೂ ರಾಜ್ಯವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ–ಕರ್ನಾಟಕ ಚಿಟಗುಪ್ಪ ತಾಲೂಕು ಘಟಕದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಅಗಸಿಯಿಂದ ಗಾಂಧಿ ವೃತ್ತ, ಬಸವರಾಜ ವೃತ್ತದ ಮಾರ್ಗವಾಗಿ ಶಿವಾಜಿ ವೃತ್ತಕ್ಕೆ ತೆರಳಿ ಪುನಃ ಬಸವರಾಜ ವೃತ್ತದ ಸಮೀಪದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹೆಸರಿಗೆ ಬರೆದ ಮನವಿಯನ್ನು ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಸುಭಾಷ ಅವರಿಗೆ ಸಲ್ಲಿಸಿದರು.
ಸಂಘಟನೆಯ ಮುಖಂಡರು ಮಾತನಾಡಿ, “ಕಳೆದ 45 ದಿನಗಳಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ ಕುಸಿದಿದೆ. ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿಂದ ಸಾಲ ಪಡೆದು ಬೀಜ, ಗೊಬ್ಬರ ಮತ್ತು ಕೃಷಿ ಸಾಮಗ್ರಿಗಳನ್ನು ಖರೀದಿಸಿ ಬಿತ್ತನೆ ಮಾಡಿದ ರೈತರು ಮಳೆ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದೆ ಮಣ್ಣಿನಲ್ಲೇ ನಾಶವಾಗಿದ್ದು, ರೈತರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.
“ಮಳೆ ಅಭಾವದಿಂದ ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ರೈತರು ಬ್ಯಾಂಕ್ ಸಾಲದ ಒತ್ತಡ, ಕುಟುಂಬ ನಿರ್ವಹಣೆಯ ವೆಚ್ಚ ಹಾಗೂ ಕೃಷಿ ನಷ್ಟದಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅನ್ನದಾತರ ಬದುಕನ್ನು ರಕ್ಷಿಸಲು ಸರ್ಕಾರ ತಕ್ಷಣ ಮಾನವೀಯ ದೃಷ್ಟಿಯಿಂದ ಕ್ರಮ ಕೈಗೊಂಡು ರಾಜ್ಯವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು” ಎಂದು ಒತ್ತಾಯಿಸಿದರು.
- “ರಾಜ್ಯದ ಎಲ್ಲಾ ರೈತರ ಬ್ಯಾಂಕ್ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ಪ್ರತಿ ಎಕರೆಗೆ ₹50 ಸಾವಿರ ಪರಿಹಾರವನ್ನು ಘೋಷಿಸಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಮಳೆ ಕೊರತೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ತಕ್ಷಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಮರುಬಿತ್ತನೆಗೆ ಅಗತ್ಯವಾದ ಉಚಿತ ಬೀಜ, ಗೊಬ್ಬರ ಹಾಗೂ ಕೃಷಿ ಸಾಮಗ್ರಿಗಳನ್ನು ಒದಗಿಸಬೇಕು. ಕೃಷಿ ಸಾಲದ ವಸೂಲಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರೈತರ ಮೇಲೆ ಯಾವುದೇ ಒತ್ತಡ ಹೇರಬಾರದು. ರೈತರ ಆರ್ಥಿಕ ಪುನಶ್ಚೇತನಕ್ಕಾಗಿ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರವು ತಮ್ಮ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಿ ರಾಜ್ಯದ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಕನ್ನಡ ಸೇನೆ–ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ರಾಜ್ಯದ ರೈತರೊಂದಿಗೆ ಸೇರಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಂತ-ಹಂತವಾಗಿ ಶಾಂತಿಯುತ ಧರಣಿ, ಪ್ರತಿಭಟನೆ ಹಾಗೂ ವಿವಿಧ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು. ಆ ಸಂದರ್ಭದಲ್ಲಿ ಉಂಟಾಗುವ ಎಲ್ಲ ಬೆಳವಣಿಗೆಗಳಿಗೆ ಸರ್ಕಾರವೇ ಸಂಪೂರ್ಣ ಹೊಣೆಯಾಗಿರುತ್ತದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಬೀದರ್ | ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ತಕ್ಷಣ ಜಾರಿಗೆ ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆ
ಈ ಸಂದರ್ಭದಲ್ಲಿ ಕನ್ನಡ ಸೇನೆ-ಕರ್ನಾಟಕ ರಾಜ್ಯ ಉಪಾಧ್ಯಕ್ಷ ರವಿ ಸ್ವಾಮಿ, ಚಿಟಗುಪ್ಪ ತಾಲೂಕು ಅಧ್ಯಕ್ಷ ಪವನ ಪೂಜಾರಿ, ಉಪಾಧ್ಯಕ್ಷ ಸತೀಷ ಗಂಜಿ ಸೇರಿದಂತೆ ಸೇನೆಯ ಪ್ರಮುಖರಾದ ತಿಪ್ಪಣ್ಣಾ ರೆಡ್ಡಿ, ಉಮೇಶ ಧೂಮಾಳೆ, ಇನೂಷ್, ರಾಜರೆಡ್ಡಿ, ಉದಯ, ಹಣಮಂತ ಕೈಕಾಡೆ, ಶಂಕುತಲಾ ಬಿರಾದರ್, ಸುಜಾತಾ ರೆಡ್ಡಿ ಅನೇಕರು ಪಾಲ್ಗೊಂಡಿದ್ದರು.





