ಮಹಿಳೆಯೊಬ್ಬರು ತಮ್ಮ 52ನೇ ವಯಸ್ಸಿನಲ್ಲಿಯೂ ಸಮುದ್ರದಲ್ಲಿ 150 ಕಿ.ಮೀ ಈಜುವ ಮೂಲಕ ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶ್ಲಾಘಿಸಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಂಧ್ರದ ಕಾಡಿನಾಡ ಜಿಲ್ಲೆಯ ಗೋಲಿ ಶಾಮಲಾ ಎಂಬವರು ಬಂಗಾಳ ಕೊಲ್ಲಿಯಲ್ಲಿ 150 ಕಿ.ಮೀ ಈಜಿದ್ದಾರೆ. ಡಿಸೆಂಬರ್ 28ರಂದು ವಿಶಾಖಪಟ್ಟಣಂನ ಆರ್‌ಕೆ ಬೀಚ್‌ನಿಂದ ಈಜಿನ ಸ್ಪರ್ಧೆ ಆರಂಭಿಸಿದ ಶಾಮಲಾ ಅವರು ಜನವರಿ 4ರಂದು ಕಾಕಿನಾಡ ಬೀಚ್‌ಅನ್ನು ತಲುಪಿದ್ದಾರೆ. ಕಾಕಿನಾಡ ತಲುಪಿದ ಶಾಮಲಾ ಅವರನ್ನು ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಶಾಮಲಾ ಅವರ ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, “52ನೇ ವಯಸ್ಸಿನಲ್ಲಿ, ಗೋಲಿ ಶ್ಯಾಮಲಾ ಅವರು ವಿಶಾಖಪಟ್ಟಣಂನಿಂದ ಕಾಕಿನಾಡಕ್ಕೆ 150 ಕಿ.ಮೀ ಈಜಿದ್ದಾರೆ. ಅವರ ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪವೇ ಒಂದು ಕಥೆಯಾಗಿದೆ. ಆಂಧ್ರ ಪ್ರದೇಶದ ಈ ಮಗಳು ತನ್ನ ಆರು ದಿನಗಳ ಪ್ರಯಾಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಜಯಗಳಿಸಿದ್ದಾರೆ. ಅವರ ಪ್ರಯಾಣವು ಮಾನವ ಚೈತನ್ಯದ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.