2022ರಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ವಿರುದ್ಧದ ಎಲ್ಲ ದೌರ್ಜನ್ಯ ಪ್ರಕರಣಗಳ ಪೈಕಿ 97.7%ರಷ್ಟು ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿರುದ್ಧದ ಪ್ರಕರಣಗಳಲ್ಲಿ 98.91% ಪ್ರಕರಣಗಳು 13 ರಾಜ್ಯಗಳಲ್ಲಿಯೇ ವರದಿಯಾಗಿವೆ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳು ಅಗ್ರಸ್ಥಾನದಲ್ಲಿವೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ಹೇಳಿವೆ.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ ಅಡಿಯಲ್ಲಿ ದಾಖಲಾದ ಪ್ರಕರಣಗಳ ಕುರಿತ ಸರ್ಕಾರಿ ವರದಿಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 2022ರಲ್ಲಿ ಎಸ್‌ಸಿ ಸಮುದಾಯದ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 52,866 ದೇಶಾದ್ಯಂತ ಪ್ರಕರಣಗಳು ದಾಖಲಾಗಿವೆ. ಈ ಪೈಕಿ, 13 ರಾಜ್ಯಗಳಲ್ಲಿಯೇ 51,656 (97.7%) ಪ್ರಕರಣಗಳು ದಾಖಲಾಗಿವೆ. ಅಗ್ರ ಮೂರು ರಾಜ್ಯಗಳಾದ ಉತ್ತರ ಪ್ರದೇಶದಲ್ಲಿ 12,287 (23.78%), ರಾಜಸ್ಥಾನದಲ್ಲಿ 8,651 (16.75%) ಹಾಗೂ ಮಧ್ಯಪ್ರದೇಶದಲ್ಲಿ 7,732 (14.97%) ಪ್ರಕರಣಗಳ ದಾಖಲಾಗಿವೆ. ನಂತರದ ಸ್ಥಾನದಲ್ಲಿ, ಬಿಹಾರ 6,799 (13.16%), ಒಡಿಶಾ 3,576 (6.93%), ಮತ್ತು ಮಹಾರಾಷ್ಟ್ರ 2,706 (5.24%) ಪ್ರಕರಣಗಳನ್ನು ದಾಖಲಿಸಿದೆ. ಒಟ್ಟು ಪ್ರಕರಣಗಳ ಪೈಕಿ, ಈ ಆರು ರಾಜ್ಯಗಳಲ್ಲಿ ಸುಮಾರು 81% ಪ್ರಕರಣಗಳು ದಾಖಲಾಗಿವೆ.
ಅದೇ ರೀತಿ, ಎಸ್‌ಟಿ ಸಮುದಾಯದ ಮೇಲಿನ ದೌರ್ಜನ್ಯಗಳ ವಿರುದ್ಧ ಒಟ್ಟು 9,735 ಪ್ರಕರಣಗಳು ದಾಖಲಾಗಿವೆ. ಆ ಪೈಕಿ, ಅತಿ ಹೆಚ್ಚು ಪ್ರಕರಣಗಳು, ಅಂದರೆ, 2,979 (30.61%) ಪ್ರಕರಣಗಳು ಮಧ್ಯಪ್ರದೇಶದಲ್ಲಿ ವರದಿಯಾಗಿವೆ. ನಂತರದ ಸ್ಥಾನದಲ್ಲಿ ರಾಜಸ್ಥಾನ 2,498 (25.66%), ಒಡಿಶಾ 773 (7.94%) ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಮಹಾರಾಷ್ಟ್ರದಲ್ಲಿ 691 (7.10%) ಮತ್ತು ಆಂಧ್ರಪ್ರದೇಶದಲ್ಲಿ 499 (5.13%) ಪ್ರಕರಣಗಳು ವರದಿಯಾಗಿವೆ.
ಸರ್ಕಾರಿ ದತ್ತಾಂಶವು, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾದ ಪ್ರಕರಣಗಳ ತನಿಖೆ ಮತ್ತು ಜಾರ್ಟ್‌ಶೀಟ್ ಸಲ್ಲಿಕೆಯ ಬಗ್ಗೆಯೂ ಮಾಹಿತಿ ಹಂಚಿಕೊಂಡಿದೆ. ಎಸ್‌ಸಿ ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60.38% ಪ್ರಕರಣಗಳ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ. ಅವುಗಳಲ್ಲಿ 14.78% ಪ್ರಕರಣಗಳು ಸಾಕ್ಷ್ಯಾಧಾರಗಳು ಕೊರತೆಯಂತಹ ಕಾರಣಗಳಿಂದ ಮುಕ್ತಾಗೊಂಡಿವೆ. ಅಲ್ಲದೆ, 2022ರ ಅಂತ್ಯದ ವೇಳೆಗೆ 17,166 ಪ್ರಕರಣಗಳ ತನಿಖೆ ಬಾಕಿ ಉಳಿದಿದೆ.
ಎಸ್‌ಟಿ ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 63.32% ಪ್ರಕರಣಗಳ ಜಾರ್ಜ್‌ಶೀಟ್ ಸಲ್ಲಿಸಲಾಗಿದೆ ಮತ್ತು 14.71% ಪ್ರಕರಣಗಳು ಮುಕ್ತಾಯಗೊಂಡಿವೆ. ಅಲ್ಲದೆ, 2,702 ಪ್ರಕರಣಗಳ ಇನ್ನೂ ಬಾಕಿ ಇದೆ ಎಂದು ವರದಿ ಹೇಳಿದೆ.
ಅದಾಗ್ಯೂ, ವರದಿಯಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವು ಕಡಿಮೆಯಾಗುತ್ತಿದೆ. 2022ರಲ್ಲಿ 32.4% ಪ್ರಕರಣಗಳಲ್ಲಿ ಮಾತ್ರವೇ ಶಿಕ್ಷೆಯಾಗಿದೆ. 2020ಕ್ಕೆ ಹೋಲಿಸಿದರೆ, ಶಿಕ್ಷೆಯ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ. 2020ರಲ್ಲಿ 39.2% ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ.
ಎಸ್‌ಸಿಗಳ ವಿರುದ್ಧ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳನ್ನು ವರದಿ ಮಾಡಿರುವ ಉತ್ತರ ಪ್ರದೇಶದಲ್ಲಿ ಈವರೆಗೆ ಯಾವುದೇ ಪ್ರದೇಶವನ್ನು ದೌರ್ಜನ್ಯ ಪೀಡಿತ ಪ್ರದೇಶವೆಂದು ಗುರುತಿಸಲಾಗಿಲ್ಲ. ಹೆಚ್ಚು ದೌರ್ಜನ್ಯಗಳು ನಡೆಯುತ್ತಿರುವ ಪ್ರದೇಶಗಳನ್ನು ಗುರುತಿಸಬೇಕು. ಅಂತಹ ಪ್ರದೇಶಗಳಲ್ಲಿ ಜಾತಿ ಆಧಾರಿತ ಹಿಂಸಾಚಾರವನ್ನು ತಡೆಯಲು ಮತ್ತು ದುರ್ಬಲ ಸಮುದಾಯಗಳಿಗೆ ರಕ್ಷಣೆಯನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ವರದಿ ಒತ್ತಿಹೇಳಿದೆ.
ಈ ವರದಿ ಓದಿದ್ದೀರಾ?: ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ, ಸಂಗ್ರಹಣೆ ಅಪರಾಧ: ಸುಪ್ರೀಂ ಕೋರ್ಟ್
ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಮಿಜೋರಾಂ, ಒಡಿಶಾ, ಪಂಜಾಬ್, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ರಾಜಸ್ಥಾನ, ಅಂಡ್ಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಪುದುಚೇರಿಗಳಲ್ಲಿ ಎಸ್‌ಸಿ/ಎಸ್‌ಟಿ ಸಂರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ವರದಿ ಹೇಳಿದೆ.
ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಕೇರಳ ಮತ್ತು ಮಧ್ಯಪ್ರದೇಶದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳ ವಿರುದ್ಧದ ಅಪರಾಧಕ್ಕೆ ಸಂಬಂಧಿಸಿದ ದೂರುಗಳ ನೋಂದಣಿಗಾಗಿ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ವರದಿ ವಿವರಿಸಿದೆ.