ಆಂಧ್ರಪ್ರದೇಶದಾದ್ಯಂತ ಗಣೇಶ ವಿಸರ್ಜನೆ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದುರಂತ ಅಪಘಾತಗಳಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಮತ್ತು ಮೊಗಲ್ತುರು ಮಂಡಲದ ಪೂರ್ವ ತಲ್ಲಾ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದು ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ನಿರ್ಲಕ್ಷ್ಯದಿಂದಾಗಿ ಸಂಭವಿಸಿದ ಅಪಘಾತಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಗಣೇಶ ವಿಸರ್ಜನೆಗೆ 8 ಸ್ಥಳಗಳಲ್ಲಿ ವ್ಯವಸ್ಥೆ; ಬಿಗಿ ಭದ್ರತೆ
ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಗಣೇಶ ವಿಗ್ರಹವನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಯುವಕರ ಗುಂಪಿಗೆ ಡಿಕ್ಕಿ ಹೊಡೆದಿದ್ದು, ನಾಲ್ವರು ಸಾವನ್ನಪ್ಪಿ, ಓರ್ವ ಗಾಯಗೊಂಡಿದ್ದಾರೆ.
ಟ್ರ್ಯಾಕ್ಟರ್ ಚಾಲಕ ಈವನ ರಾಜು (40) ನೀರು ಕುಡಿಯಲು ಕೆಳಗಿಳಿದಾಗ ಬಾಲಕನೊಬ್ಬ ವಾಹನ ಚಲಾಯಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಆದಾಗ್ಯೂ, ಸ್ಥಳೀಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ ವಾಹನದ ನಿಯಂತ್ರಣ ಕಳೆದುಕೊಂಡದ್ದು ಚಾಲಕನೇ ಎನ್ನಲಾಗಿದೆ.
ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪಾಡೇರುವಿನ ಚಿಂತಲವೀಡಿ ಜಂಕ್ಷನ್‌ನಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ವಿನಾಯಕ ನಿಮಜ್ಜನ ಕಾರ್ಯಕ್ರಮದ ಸಮಯದಲ್ಲಿ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಗಣೇಶ ವಿಸರ್ಜನೆ ಕಾರ್ಯಕ್ರಮದ ವೇಳೆ ಆಂಧ್ರಪ್ರದೇಶದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಪೊಲೀಸರು ಎರಡೂ ಘಟನೆಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.
