ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಗ್ರಾನೈಟ್ ಕ್ವಾರಿಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಡಿಶಾದ ಆರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬಲ್ಲಿಕುರವ ಬಳಿಯ ಸತ್ಯಕೃಷ್ಣ ಗ್ರಾನೈಟ್ ಕ್ವಾರಿಯಲ್ಲಿ ಈ ಘಟನೆ ನಡೆದಿದೆ.
ಬಂಡೆ ಕುಸಿತ ಸಂಭವಿಸಿದಾಗ 16 ಕಾರ್ಮಿಕರು ಸ್ಥಳದಲ್ಲಿದ್ದರು. ಆರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇತರ ಹತ್ತು ಮಂದಿಗೆ ಗಂಭೀರ ಗಾಯಗಳಾಗಿವೆ. ಅವಶೇಷಗಳ ಅಡಿಯಲ್ಲಿ ಇನ್ನೂ ಇಬ್ಬರ ಶವ ಸಿಲುಕಿದೆ. ನಾಲ್ವರ ಮೃತದೇಹ ಹೊರತೆಗೆಯಲಾಗಿದೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ಜೆಕೆ ಸಿಮೆಂಟ್ ಫ್ಯಾಕ್ಟರಿ ಮೇಲ್ಛಾವಣಿ ಕುಸಿತ; ಮೂವರು ಕಾರ್ಮಿಕರ ಸಾವು
ಗಾಯಾಳುಗಳನ್ನು ನರಸರಾವ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬಾಪಟ್ಲಾ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದುಡಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕ್ವಾರಿಯಲ್ಲಿ ಅಸಮರ್ಪಕ ಸುರಕ್ಷತಾ ಕ್ರಮಗಳು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ವರದಿಯಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅಪಘಾತದ ಕಾರಣದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಗಾಯಗೊಂಡ ಕಾರ್ಮಿಕರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ದೊರೆಯುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
