ಏಳು ವರ್ಷಗಳ ಕಾಲ ಪ್ರೀತಿಸಿದ್ದ ಪ್ರಿಯಕರ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆಂದು ಯುವತಿಯೊಬ್ಬರು ಆ್ಯಸಿಡ್ ಕುಡಿದಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ 19 ವರ್ಷದ ಯುವತಿ ಆ್ಯಸಿಡ್ ಕುಡಿದು, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರೆಹಾನ್ ಎಂಬ ನಕಲಿ ಹೆಸರಿನಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದ ಯುವಕ ತನ್ನೊಂದಿಗೆ 7 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದನು. ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಬಂಧವನ್ನೂ ಬೆಳೆಸಿದ್ದನು. ಆದರೆ, ಈಗ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಹೇಳಲಾಗಿದೆ.
ಆರೋಪಿಯು ಯುವತಿಗೆ ಎರಡು ಬಾರಿ ಗರ್ಭಪಾತ ಮಾಡಿಸಿದ್ದಾನೆ. ಆದರೆ, ಈಗ ಮದುವೆಯಾಗಲು ನಿರಾಕರಿಸಿದ ಕಾರಣ, ಆಕೆ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಪರಿಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಆಕೆ ಬದುಕುಳಿಯುವ ಸಾಧ್ಯತೆ ಇಲ್ಲವೆಂದು ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ಪೋಷಕರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. “ದೆಹಲಿಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ರೋಪಿಯು ತನ್ನನ್ನು ರೆಹಾನ್ ಎಂಬುದಾಗಿ ನಮ್ಮ ಮಗಳಿಗೆ ಪರಿಚಯಿಸಿಕೊಂಡಿದ್ದ. ಏಳು ವರ್ಷಗಳಿಂದ ಮಗಳನ್ನು ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಾನೆ. ಆತ ವಂಚಿಸುತ್ತಿದ್ದಾನೆ ಮತ್ತು ಆತನ ಗುರುತನ್ನು ಮರೆಮಾಚಿದ್ದಾನೆ ಎಂಬುದು ತಿಳಿಯದೆ ಅವರ ಪ್ರೀತಿಯನ್ನು ನಾವೂ ಒಪ್ಪಿಕೊಂಡಿದ್ದೆವು. ಮಗಳಿಗೆ 18 ವರ್ಷ ತುಂಬಿದ ಬಳಿಕ ಮದುವೆ ಮಾಡಲು ನಿರ್ಧರಿಸಿದ್ದೆವು” ಎಂದು ವಿವರಿಸಿದ್ದಾರೆ.
“ಈ ವರ್ಷ ಮಗಳಿಗೆ 19 ವರ್ಷ ತುಂಬಿದ್ದರಿಂದ, ವಿವಾಹ ಮಾಡಲು ಮುಂದಾದೆವು. ರೆಹಾನ್‌ಅನ್ನು ಸಂಪರ್ಕಿಸಿ ಮದುವೆ ಪ್ರಸ್ತಾಪ ಇಟ್ಟೆವು. ಆದರೆ, ಆತ ವಿವಾಹಕ್ಕೆ ನಿರಾಕರಿಸಿದ್ದಾನೆ. ಮಾತ್ರವಲ್ಲದೆ, ಮಗಳ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು, ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ದೌರ್ಜನ್ಯ ಎಸಗಿದ್ದಾನೆ. ನಮಗೆ ನ್ಯಾಯ ಬೇಕು” ಎಂದು ಸಂತ್ರಸ್ತ ಯುವತಿಯ ತಂದೆ ಆಗ್ರಹಿಸಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.