ಶೇ.70 ರಷ್ಟು ವೈದ್ಯಕೀಯ ಕಾಲೇಜುಗಳು ಎಂಬಿಬಿಎಸ್ ಇಂಟರ್ನ್‌ಶಿಪ್ ಮಾಡುತ್ತಿರುವ ವೈದ್ಯರಿಗೆ ಯಾವುದೇ ಶಿಷ್ಯವೇತನ ನೀಡುತ್ತಿಲ್ಲ ಅಥವಾ ಕನಿಷ್ಠ ಶಿಷ್ಯವೇತನ ಪಾವತಿಸುತ್ತಿಲ್ಲ ಎಂಬ ದೂರಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ (ಸೆಪ್ಟೆಂಬರ್ 15) ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ನಿರ್ದೇಶನ ನೀಡಿದೆ.
ಆರ್ಮಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ (ಎಸಿಎಂಎಸ್) ಶಿಷ್ಯ ವೇತನ ಪಾವತಿಸಲು ಕೋರಿ ವೈದ್ಯಕೀಯ ಇಂಟರ್ನಿಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ವಿಚಾರಣೆ ನಡೆಸುತ್ತಿದ್ದ ವೇಳೆ ಈ ಬೆಳವಣಿಗೆ ನಡೆದಿದೆ.
ಎಸಿಎಂಎಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ನಿವೃತ್ತ ಕರ್ನಲ್ ಆರ್ ಬಾಲಸುಬ್ರಮಣ್ಯಂ ಅವರು, ಸಶಸ್ತ್ರ ಸಿಬ್ಬಂದಿಯ ಮಕ್ಕಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿ (ಎಡಬ್ಲ್ಯೂಇಎಸ್) ಸಂಸ್ಥೆಯು ಯಾವುದೇ ಲಾಭರಹಿತ ಆಧಾರದ ಮೇಲೆ ಕಾಲೇಜುಗಳನ್ನು ನಡೆಸುತ್ತಿದೆ. ಸಂಸ್ಥೆಯು ಯಾವುದೇ ಸರ್ಕಾರಿ ನೆರವು ಪಡೆಯುತ್ತಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.
ಈ ಸುದ್ದಿ ಓದಿದ್ದೀರಾ? ದಾಭೋಲ್ಕರ್ ಹತ್ಯೆ ಪ್ರಕರಣ: ಅಂತಿಮ ವರದಿಯಲ್ಲಿ ಮೂವರು ಆರೋಪಿಗಳ ಬಿಡುಗಡೆಗೆ ಸಿಬಿಐ ಶಿಫಾರಸ್ಸು
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್, ನಾವು ಲಾಭರಹಿತವಾಗಿರುವುದರಿಂದ ಸಫಾಯಿ ಕರ್ಮಚಾರಿಗಳಿಗೆ ಹಣ ನೀಡುವುದಿಲ್ಲ ಎಂದು ನೀವು ಹೇಳಬಹುದೆ? ಇದು ನಿಮಗೆ ಲಾಭ ಆದರೆ ಅವರಿಗೆ ಜೀವನಾಧಾರವಾಗಿದೆ. ನಾವು ಶಿಕ್ಷಕರಿಗೆ ವೇತನ ನೀಡುವುದಿಲ್ಲ ಎಂದು ನೀವು ಹೇಳಬಹುದೇ? ಎಲ್ಲರಿಗೂ ಪೋಷಕರ ಬೆಂಬಲ ಇಲ್ಲದಿರಬಹುದು. ಕಾನೂನು ಗುಮಾಸ್ತರಿಗೆ ಮಾಸಿಕ 80,000 ರೂ.ಗಳನ್ನು ಸುಪ್ರೀಂ ಕೋರ್ಟ್ ಪಾವತಿಸುತ್ತದೆ ಎಂದು ಸೂಚಿಸಿದ ಮುಖ್ಯ ನ್ಯಾಯ ಮೂರ್ತಿಗಳು ಎಸಿಎಂಎಸ್ ಕನಿಷ್ಠ 1 ಲಕ್ಷ ರೂ. ಪಾವತಿಸಬೇಕು ಎಂದು ಕೇಳಿದರು.
ಈ ಹಂತದಲ್ಲಿ ಪೀಠವು ಇತರ ಸರ್ಕಾರಿ ಕಾಲೇಜುಗಳಲ್ಲಿ ಪಾವತಿಸುವ ಶಿಷ್ಯವೇತನ ದರವನ್ನು ಹೋಲಿಸಿತು ಮತ್ತು ಅರ್ಜಿದಾರರಿಗೆ ಅವರು ಎಷ್ಟು ನಿರೀಕ್ಷಿಸುತ್ತಿದ್ದಾರೆ ಎಂದು ಕೇಳಿತು. ಅರ್ಜಿದಾರರ ಪರ ವಕೀಲ ಚಾರು ಮಾಥುರ್, 25,000 ರೂ. ಎಂದು ಹೇಳಿದರು.
ನಂತರದಲ್ಲಿ ಪೀಠವು ಪ್ರಸ್ತುತ ನೂರು ಇಂಟರ್ನಿಗಳಿದ್ದು ವೈದ್ಯಕೀಯ ಇಂಟರ್ನ್‌ಗಳಿಗೆ ಶಿಷ್ಯ ವೇತನವಾಗಿ ತಿಂಗಳಿಗೆ ರೂ.25,000 ಪಾವತಿಸಲು ಎಸಿಎಂಎಸ್‌ಗೆ ಸೂಚಿಸಿತು.
“ಇಂಟರ್ನ್‌ಶಿಪ್ ಅವಧಿಯಲ್ಲಿ ಇಂಟರ್ನ್‌ಗಳಿಗೆ ಶಿಷ್ಯವೇತನ ಪಾವತಿಸಬೇಕಾಗುತ್ತದೆ. ಎನ್‌ಎಂಸಿ ಅಳವಡಿಸಿಕೊಂಡಿರುವ ನಿಯಮಾವಳಿಗಳ ಆದೇಶವನ್ನು ಉಲ್ಲಂಘಿಸಲಾಗುವುದಿಲ್ಲ” ಎಂದು ಪೀಠವು ತನ್ನ ತನ್ನ ಆದೇಶದಲ್ಲಿ ಹೇಳಿದೆ.
ಈ ಹಂತದಲ್ಲಿ ವಕೀಲ ವೈಭವ್ ಗಗ್ಗರ್ ಅವರು ಶೇ. 70 ರಷ್ಟು ಕಾಲೇಜುಗಳು ಶಿಷ್ಯ ವೇತನ ಪಾವತಿಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋರ್ಟ್ ಅಫಿಡವಿಟ್ ಸಲ್ಲಿಸುವಂತೆ ಎನ್‌ಎಂಸಿ ಪರ ವಕೀಲ ಗೌರವ್ ಶರ್ಮಾ ಅವರಿಗೆ ಸೂಚಿಸಿತು.