2022ರಲ್ಲಿ ಹತ್ತು ವರ್ಷದ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ 70 ವರ್ಷದ ವ್ಯಕ್ತಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ಉತ್ತರ ಪ್ರದೇಶದ ಝಾನ್ಸಿ ವಿಶೇಷ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ಝಾನ್ಸಿ ಜಿಲ್ಲೆಯ ತೋಡಿ ಫತೇಪುರ್ ಬಳಿ 2022ರ ಜುಲೈ 30ರಂದು ಘಟನೆ ನಡೆದಿತ್ತು. ಸಂತ್ರಸ್ತೆ ತನ್ನ ತಾಯಿ ಮತ್ತು ಸಹೋದರನೊಂದಿಗೆ ತೋಟಕ್ಕೆ ಹೋಗಿದ್ದರು. ಆಕೆಯ ತಾಯಿ ಕೆಲಸದಲ್ಲಿ ತೊಡಗಿದ್ದಾಗ, ಬಾಲಕಿ ಒಬ್ಬಳೇ ಆಟವಾಡುತ್ತಿದ್ದಳು. ಬಾಲಕಿ ಒಬ್ಬಂಟಿಯಾಗಿರುವುದನ್ನು ಕಂಡ ಆರೋಪಿ, ಆಕೆಯ ಮೇಲೆ ಸತ್ಯಾಚಾರ ಎಸಗಿದ್ದ.
ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಆರೋಪಿ ವಿರುದ್ದ ಐಪಿಸಿ ಸೆಕ್ಷನ್ 376 (ಎಬಿ), 5/6, ಪೋಕ್ಸೊ ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ ವಿಶೇಷ ಪೋಕ್ಸೊ ಕಾಯ್ದೆಯ ನ್ಯಾಯಾಧೀಶ ಮೊಹಮ್ಮದ್ ನಿಯಾಜ್ ಅಹ್ಮದ್ ಅನ್ಸಾರಿ ಅವರು ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿದ್ದಾರೆ. ಅಪರಾಧಿಗೆ ಇಪ್ಪತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡದ ಹಣವನ್ನು ಸಂತ್ರಸ್ತೆಗೆ ನೀಡಬೇಕೆಂದು ಆದೇಶಿಸಿದ್ದಾರೆ.