ಶೌಚಾಲಯ ಇಲ್ಲದಿರುವ ಕಾರಣದಿಂದ ಬಯಲಿನಲ್ಲಿ ಶೌಚ ತಪ್ಪಿಸಿಕೊಳ್ಳುವ ಸಲುವಾಗಿ ಕಳೆದ ಆರು ತಿಂಗಳಿಂದ ಜಾರ್ಖಂಡ್ ರಾಜ್ಯದ ಛತ್ರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಓದುತ್ತಿರುವ 700ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಡಿಮೆ ಆಹಾರ, ನೀರು ಸೇವಿಸುತ್ತಿರುವ ಆಘಾತಕಾರಿ ಹಾಗೂ ಅಮಾನವೀಯ ಘಟನೆ ನಡೆಯುತ್ತಿದೆ.
ಮಯೂರ್‌ಹಂಡ್ ಬ್ಲಾಕ್ ಪ್ರಧಾನ ಕಚೇರಿಯಿಂದ ಒಂದು ಕಿ.ಮೀ ದೂರದಲ್ಲಿರುವ ಸ್ವಾಮಿ ವಿವೇಕಾನಂದ ಪ್ರೌಢಶಾಲೆ 5 ಎಕರೆಗಳಷ್ಟು ವಿಸ್ತಾರವಾಗಿದ್ದು, ಬಹು ದೊಡ್ಡ ಮೈದಾನವನ್ನು ಕೂಡ ಹೊಂದಿದೆ. ಆದರೆ ಶಾಲೆಯಲ್ಲಿ ಒಂದೇ ಒಂದು ಶೌಚಾಲಯವಿಲ್ಲ.
ಶಾಲಾ ಕಟ್ಟಡ ನವೀಕರಣ ಕಾಮಗಾರಿ ವಹಿಸಿಕೊಂಡಿದ್ದ ಗುತ್ತಿಗೆದಾರರು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಹಿಂದೆ ಇದ್ದ ಶೌಚಾಲಯವನ್ನೇ ಕೆಡವಿದ್ದಾರೆ. ಶಾಲೆಯು ಸುಮಾರು 1,100 ವಿದ್ಯಾ ರ್ಥಿಗಳನ್ನು ಹೊಂದಿದೆ. ಶಾಲಾ ವಿದ್ಯಾರ್ಥಿಗಳು ಮಾತ್ರವಲ್ಲ ಪುರುಷ ಶಿಕ್ಷಕರು ಶೌಚಾಲಯಕ್ಕಾಗಿ ಪಕ್ಕದಲ್ಲಿರುವ ಅರಣ್ಯ ಹಾಗೂ ಸ್ಥಳೀಯರ ಜಮೀನುಗಳನ್ನು ಆಶ್ರಯಿಸಬೇಕಿದೆ. ಇದಕ್ಕೂ ಹಲವು ತೊಂದರೆಗಳನ್ನು ಇವರು ಎದುರಿಸುತ್ತಿದ್ದಾರೆ.
ಶೌಚಾಲಯ ಒಳಗೊಂಡಿರುವ ಬಾಡಿಗೆ ಕೊಠಡಿಗಳನ್ನು ಆಶ್ರಯಿಸಿರುವ ಮಹಿಳಾ ಶಿಕ್ಷಕರು ಸದ್ಯ ಈ ತೊಂದರೆಯಿಂದ ಪಾರಾಗಿದ್ದಾರೆ. ಆದರೆ ಈ ಕೊಠಡಿಗಳ ವ್ಯವಸ್ಥೆ ಪಡೆಯಲು ಹೆಚ್ಚು ಹಣವನ್ನು ನೀಡಬೇಕಾಗಿದೆ. ಸರ್ಕಾರಿ ಶಾಲೆಯಲ್ಲಿರುವ 20 ಶಿಕ್ಷಕರಲ್ಲಿ ಮೂವರು ಮಹಿಳೆಯರು, ಇಬ್ಬರು ಮಹಿಳಾ ಬೋಧಕೇತರ ಸಿಬ್ಬಂದಿ ಕೂಡ ಇದ್ದಾರೆ ಎಂದು ಶಾಲೆಯಲ್ಲಿನ ಶಿಕ್ಷಕರೊಬ್ಬರು ಘಟನೆಯ ಬಗ್ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ನಿರೀಕ್ಷಣಾ ಜಾಮೀನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಈ ಕುರಿತು ಜಿಲ್ಲಾಡಳಿತ ಹಾಗೂ ರಾಜ್ಯ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದರೂ ಭರವಸೆ ನೀಡಿದ್ದು ಬಿಟ್ಟರೆ ತಕ್ಷಣಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಜಾರ್ಖಂಡ್ ರಾಜ್ಯ ಶಿಕ್ಷಣ ಕಾರ್ಯದರ್ಶಿ ಕೆ ರವಿಕುಮಾರ್ ತಿಳಿಸಿದ್ದಾರೆ.
“ಶಿಕ್ಷಣ ಇಲಾಖೆಯು ವಿಶ್ರಾಂತಿ ಕೊಠಡಿ ಸೌಲಭ್ಯಗಳ ಅಗತ್ಯವಿರುವ ಶಾಲೆಗಳನ್ನು ಗುರುತಿಸಿದೆ. ನಾವು ಪ್ರಸ್ತಾವನೆಯನ್ನು ರೂಪಿಸಿದ್ದೇವೆ ಮತ್ತು ಈ ಅಗತ್ಯ ಸೌಲಭ್ಯಗಳ ನಿರ್ಮಾಣವು ಸುಮಾರು 113 ಶಾಲೆಗಳಲ್ಲಿ ನಡೆಯುತ್ತಿದೆ. ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ನರಕದ ಸಮಸ್ಯೆ ಶೀಘ್ರದಲ್ಲಿ ಪರಿಹಾರವಾಗುತ್ತದೆ” ಎಂದು ಕೆ ರವಿ ಕುಮಾರ್ ಹೇಳಿದ್ದಾರೆ.
“ತಾನು ಮತ್ತು ತನ್ನ ಸಹಪಾಠಿಗಳು ಶೌಚದ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದಕ್ಕಾಗಿ ಹತ್ತಿರದ ಮನೆಗಳ ಬಳಿ ಹೋಗುತ್ತಿದ್ದೆವು. ತುಂಬ ಮುಜುಗರವಾಗುತ್ತಿತ್ತು. ಆದರೆ ಬೇರೆ ದಾರಿಯಿರಲಿಲ್ಲ” ಎಂದು ವಿದ್ಯಾರ್ಥಿನಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
“ಗ್ರಾಮಸ್ಥರು ಸಹಕರಿಸುತ್ತಾರೆ ಮತ್ತು ಅವರು ನಮ್ಮ ಸಮಸ್ಯೆಯನ್ನು ತಿಳಿದಿರುವ ಕಾರಣ ಅವರ ಶೌಚಾಲಯಗಳನ್ನು ಬಳಸಲು ನಮಗೆ ಅವಕಾಶ ಮಾಡಿಕೊಡುತ್ತಾರೆ. ಆದರೆ ಪ್ರತಿದಿನ ಅವರ ಸಹಾಯವನ್ನು ಪಡೆಯಲು ನಮಗೆ ಮುಜುಗರವಾಗುತ್ತದೆ” ಎಂದು ಕೆಲವು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ಕುಮಾರ್ ಮಿಶ್ರಾ ಮಾತನಾಡಿ, ಹೊಸ ಶೌಚಾಲಯಗಳ ನಿರ್ಮಾಣವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು, ಆದರೆ ತಾತ್ಕಾಲಿಕ ವ್ಯವಸ್ಥೆ ಮಾಡುವ ಬಗ್ಗೆ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಕ್ಟೋಬರ್ 31 ರಂದು ನಿಗದಿಯಾಗಿದ್ದ ಸಭೆಯನ್ನು ರದ್ದುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ಚಿತ್ರಾ ಲೋಕಸಭಾ ಕ್ಷೇತ್ರದ ಸಂಸದರನ್ನು ಸಂಪರ್ಕಿಸಿದರೆ ಅವರಿಂದ ಯಾವುದೇ ರೀತಿಯ ಸಹಾಯ ದೊರಕಿಲ್ಲ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.
ಶಾಲೆಯ ಪ್ರಾಂಶುಪಾಲರು ಈ ಸಮಸ್ಯೆಯ ಬಗ್ಗೆ ಮಾತನಾಡಿ, ಶಾಲೆಯಿಂದ ಸ್ವಲ್ಪ ದೂರದ ಶಾಲಾ ಕಟ್ಟಡದಲ್ಲಿ ಶೌಚಾಲಯಗಳಿದ್ದು, ಅಸುರಕ್ಷತೆಯ ಕಾರಣದಿಂದ ವಿದ್ಯಾರ್ಥಿನಿಯರು ಅಲ್ಲಿಗೆ ತೆರಳಲು ನಿರಾಕರಿಸುತ್ತಾರೆ” ಎಂದು ಹೇಳುತ್ತಾರೆ.