ಸಿಬ್ಬಂದಿಗಳು ಯಾವುದೇ ಸೂಚನೆಯಿಲ್ಲದೆ ಸಾಮೂಹಿಕವಾಗಿ ‘ಸಿಕ್ ಲೀವ್’ (Mass Sick Leave) ತೆಗೆದುಕೊಂಡ ಕಾರಣದಿಂದಾಗಿ ಕನಿಷ್ಠ 78 ಅಂತರರಾಷ್ಟ್ರೀಯ ಮತ್ತು ದೇಶೀಯ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಸಿಬ್ಬಂದಿಗಳು ವೇತನ ಮತ್ತು ಪ್ರೋತ್ಸಾಹಧನದ ವಿಚಾರದಲ್ಲಿ ಅತೃಪ್ತರಾಗಿದ್ದಾರೆಂದು ಶಂಕಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇಂಡಿಯಾ ಟುಡೆ ಟಿವಿ ವರದಿ ಮಾಡಿದೆ.
#WATCH | Kerala: Passengers at Thiruvananthapuram airport face difficulties as more than 70 international and domestic flights of Air India Express have been cancelled after senior crew member of the airline went on mass ‘sick leave’. pic.twitter.com/c234yIzedA
— ANI (@ANI) May 8, 2024
ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆಯನ್ನೂ ಸರಿಪಡಿಸಲು ಸಿಬ್ಬಂದಿಗಳು ಬಯಸಿದ್ದರು. ಈಗ ಪ್ರತಿಭಟನೆಯ ಭಾಗವಾಗಿ ಎಲ್ಲ ಸಿಬ್ಬಂದಿಗಳು ಏಕಾಏಕಿ ರಜೆ ಹಾಕಿಕೊಂಡಿದ್ದಾರೆ. ಅಲ್ಲದೆ, ತಮ್ಮ ಫೋನ್ಗಳನ್ನು ಕೂಡಾ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಮಂಗಳೂರು | ಬೆಂಗಳೂರಿಗೆ ತೆರಳಬೇಕಿದ್ದ ಏರ್ಇಂಡಿಯಾ ವಿಮಾನ ಕೊನೆ ಕ್ಷಣದಲ್ಲಿ ರದ್ದು: ಪ್ರಯಾಣಿಕರಿಂದ ಆಕ್ರೋಶ
“ನಮ್ಮ ಸಂಸ್ಥೆಯ ಸಿಬ್ಬಂದಿಗಳ ಒಂದು ವಿಭಾಗವು ಕೊನೆಯ ಕ್ಷಣದಲ್ಲಿ ಅನಾರೋಗ್ಯಕ್ಕೆ ಒಳಗಾಗಿರುವುದಾಗಿ ತಿಳಿಸಿದೆ. ಇದರಿಂದಾಗಿ ವಿಮಾನ ವಿಳಂಬ ಮತ್ತು ರದ್ದತಿಯಾಗಿದೆ. ನಾವು ಪ್ರಯಾಣಿಕರಿಗೆ ಇದರಿಂದ ಉಂಟಾಗುವ ಅನಾನುಕೂಲತೆಗಳನ್ನು ತಪ್ಪಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಜೊತೆಗೆ ಸಿಬ್ಬಂದಿಗಳು ದಿಢೀರ್ ರಜೆ ಹಾಕಲು ಕಾರಣವೇನು ಎಂದು ತಿಳಿಯುವ ಪ್ರಯತ್ನ ಮಾಡುತ್ತೇವೆ” ಎಂದು ಏರ್ ಇಂಡಿಯಾ ಹೇಳಿದೆ.
“ಈ ಅನಿರೀಕ್ಷಿತ ಅಡಚಣೆಗಾಗಿ ನಾವು ನಮ್ಮ ಪ್ರಯಾಣಿಕರಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಅಡಚಣೆಯು ನಾವು ಒದಗಿಸಲು ಶ್ರಮಿಸುವ ಸೇವೆಯ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಒತ್ತಿಹೇಳುತ್ತೇವೆ. ಈ ವಿಮಾನ ರದ್ದಾದ ಬಳಿಕ ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ನಾವು ಪೂರ್ಣ ಮರುಪಾವತಿ ಅಥವಾ ಇನ್ನೊಂದು ದಿನಾಂಕಕ್ಕೆ ಟಿಕೆಟ್ ವರ್ಗಾವಣೆ ಮಾಡುತ್ತೇವೆ” ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಕೆಟ್ಟಿದ್ಯಾ ಶಿವಮೊಗ್ಗ ಏರ್ಪೋರ್ಟ್ ನಸೀಬು; ಬೆಂಗಳೂರಿಗೆ ಹಾರಬೇಕಿದ್ದ ವಿಮಾನ ರದ್ದು
ಇನ್ನು 200ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಅನಾರೋಗ್ಯ ಕಾರಣ ನೀಡಿ ರಜೆ ಹಾಕಿದ್ದಾರೆ. ಇದರಿಂದಾಗಿ ಕೊಚ್ಚಿ, ಕ್ಯಾಲಿಕಟ್ ಮತ್ತು ಬೆಂಗಳೂರು ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟಕ್ಕೆ ಅಡಚಣೆಯಾಗಿದೆ.
ಈ ಪ್ರತಿಭಟನೆಗೆ ಕಾರಣವೇನು?
ಮೂಲಗಳ ಪ್ರಕಾರ, ಟಾಟಾ ಗ್ರೂಪ್ನೊಂದಿಗೆ ವಿಲೀನಗೊಂಡ ನಂತರ ಸಿಬ್ಬಂದಿಗಳನ್ನು ಸಮಾನವಾಗಿ ನೋಡಲಾಗುತ್ತಿಲ್ಲ. ಇಂಟರ್ವೀವ್ನಲ್ಲಿ ಪಾಸ್ ಆಗಿದ್ದರೂ ಕೂಡಾ ಕೆಲವು ಸಿಬ್ಬಂದಿಗೆ ಕಡಿಮೆ ದರ್ಜೆಯ ಉದ್ಯೋಗ ನೀಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ನ ಸಿಬ್ಬಂದಿ ಆರೋಪಿಸಿದ್ದಾರೆ.