ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಎಂಟು ಮಂದಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿದೆ.
ಕಾರು ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಅಪಘಾತ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ಮಧ್ಯರಾತ್ರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಹಿಂತಿರುಗುತ್ತಿದ್ದಾಗ ಕಾರು ಅಪಘಾತ ಸಂಭವಿಸಿದೆ. ಸದ್ಯ ಮೃತರ ಗುರುತು ಪತ್ತೆಹಚ್ಚಲಾಗುತ್ತಿದೆ.
ಇದನ್ನು ಓದಿದ್ದೀರಾ? ಬಿಹಾರ | ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ಐವರ ದಾರುಣ ಸಾವು
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕತಿಹಾರ್ ಎಸ್ಪಿ ವೈಭವ್ ಶರ್ಮಾ, “ಸಮೇಲಿ ಬ್ಲಾಕ್ ಕಚೇರಿ ಬಳಿಯ ಎನ್ಎಚ್-31ರಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ಗೆ ಎಸ್ಯುವಿ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಪಿ ವೈಭವ್ ಹೇಳಿದ್ದಾರೆ.
ಮೃತರು ಸುಪೌಲ್ ನಿವಾಸಿಗಳು ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಗುರುತು ಪತ್ತೆಯಾಗಿಲ್ಲ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
