ಎಂಟು ವರ್ಷದ ಬಾಲಕಿ ಮೇಲೆ 10ನೇ ತರಗತಿ ವಿದ್ಯಾರ್ಥಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಆರೋಪಿ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಪೊಲೀಸರು ಹತ್ತನೇ ತರಗತಿ ವಿದ್ಯಾರ್ಥಿ, 17 ವರ್ಷದ ಆರೋಪಿಯನ್ನು ಬಂಧಿಸಿ ಬಾಲಾಪರಾಧಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಜಾಮೀನು ಪಡೆದು ಹೊರಬಂದು ಸಂತ್ರಸ್ತೆಯನ್ನು ಹತ್ಯೆಗೈದ ಅತ್ಯಾಚಾರ ಆರೋಪಿ
ಎಂಟು ವರ್ಷದ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ನೋಡಿದ ನೆರೆಮನೆಯಲ್ಲಿ ವಾಸಿಸುತ್ತಿದ್ದ ಆರೋಪಿ ಆಕೆಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪ್ರದೇಶ ಪೊಲೀಸ್ ಅಧಿಕಾರಿ ಮುಖೇಶ್ ಕುಮಾರ್ ಶಕ್ಯಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಆರೋಪಿ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುವ ಜೊತೆಗೆ ಸಣ್ಣಪುಟ್ಟ ಕೆಲಸಗಳನ್ನೂ ಮಾಡುತ್ತಿದ್ದ ಎನ್ನಲಾಗಿದೆ.
ಬಾಲಕಿ ಕಿರುಚುವುದನ್ನು ಕೇಳಿದ ಸ್ಥಳೀಯರು ಮನೆಯೊಳಗೆ ನುಗ್ಗಿ ಆರೋಪಿಯನ್ನು ಹಿಡಿದಿದ್ದಾರೆ. ಪೊಲೀಸರು ಬಂದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂತ್ರಸ್ತ ಬಾಲಕಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆಕೆ ತನ್ನ ಪೋಷಕರೊಂದಿಗೆ ಮನೆಯಲ್ಲಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಬಾಲಕಿಯ ಹೇಳಿಕೆಯನ್ನು ಶೀಘ್ರದಲ್ಲೇ ದಾಖಲಿಸಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಗಳ ಏರಿಕೆ
2016ರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಅಧಿಕವಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಗರ್ಭಪಾತ, ಅತ್ಯಾಚಾರ-ಕೊಲೆ – ಇಂತಹ ಅಪರಾಧಗಳು ಹೆಚ್ಚಾಗುತ್ತಿದೆ. ಎನ್‌ಜಿಒ ಸಿಆರ್‌ವೈ ವರದಿಯ ಪ್ರಕಾರ ದೇಶದಲ್ಲಿ 2016ರಿಂದ 2022ರ ನಡುವೆ ಅಪ್ರಾಪ್ತರ ಮೇಲೆ ಅತ್ಯಾಚಾರ ಪ್ರಕರಣಗಳು ಸುಮಾರು ಶೇಕಡ 96ರಷ್ಟು ಏರಿಕೆಯಾಗಿದೆ. 2020 ಹೊರತುಪಡಿಸಿ 2016ರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 2021ರಿಂದ 2022ರ ನಡುವೆ ಶೇಕಡ 6.9ರಷ್ಟು ಪ್ರಕರಣಗಳು ಅಧಿಕವಾಗಿದೆ. ಜೊತೆಗೆ ಬಾಲಾಪರಾಧಿಗಳ ಸಂಖ್ಯೆಯು ಅಧಿಕವಾಗುತ್ತಿದೆ. ಬಾಲಕರು ಇಂತಹ ದುಷ್ಕೃತ್ಯ ಮಾಡಲು ಲೈಂಗಿಕತೆ ಬಗ್ಗೆ ಸರಿಯಾದ ಜ್ಞಾನ ನೀಡದಿರುವುದು, ಸೂಕ್ಷ್ಮತೆ ಮೂಡಿಸದಿರುವುದು ಕಾರಣ ಎನ್ನಬಹುದು.
ಇವು ವರದಿಯಾದ ಪ್ರಕರಣಗಳಾದರೆ, ಇನ್ನೂ ಅದೆಷ್ಟೋ ಪ್ರಕರಣಗಳು ಮುನ್ನೆಲೆಗೆ ಬಂದಿಲ್ಲ. ಸಂತ್ರಸ್ತೆ/ ಸಂತ್ರಸ್ತ ಅಥವಾ ಆಕೆ/ ಆತನ ಕುಟುಂಬಸ್ಥರು ಮರ್ಯಾದೆಗೆ ಅಂಜಿ ಅತ್ಯಾಚಾರಿಗಳ ವಿರುದ್ದ ದೂರು ದಾಖಲಿಸುವುದೇ ಇಲ್ಲ. ಇನ್ನೊಂದೆಡೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಅತ್ಯಾಚಾರಿಗಳಿಗೆ ಭಯಪಟ್ಟು ಸಂತ್ರಸ್ತರು ದೂರು ದಾಖಲಿಸುವುದಿಲ್ಲ.
