2018-22ರಲ್ಲಿ ಹೈಕೋರ್ಟ್‌ಗಳಿಗೆ ನೇಮಕಗೊಂಡ ನ್ಯಾಯಾಧೀಶರಲ್ಲಿ ಶೇ.80ರಷ್ಟು ಮೇಲ್ಜಾತಿಯವರು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನ್ಯಾಯಾಲಯಗಳಲ್ಲಿ ದುರ್ಬಲ ಸಮುದಾಯಗಳ ನ್ಯಾಯಾಧೀಶರ ಪ್ರಾತಿನಿಧ್ಯದ ಕುರಿತ ಪ್ರಶ್ನೆಯೊಂದಕ್ಕೆ ಕಾನೂನು ಸಚಿವಾಲಯ ಉತ್ತರಿಸಿದೆ. ಸರ್ಕಾರ ನೀಡಿದ ಮಾಹಿತಿಯಿಂದ ಹೈಕೋರ್ಟ್‌ಗಳಲ್ಲಿ ಮೇಲ್ಜಾತಿಯವರ ಪ್ರಾತಿನಿಧ್ಯ ಇರುವುದು ಕಂಡುಬಂದಿದೆ.
ಒಟ್ಟು 540 ನ್ಯಾಯಾಧೀಶರಲ್ಲಿ ಶೇ.4 ರಷ್ಟು ಜನರು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದವರಾಗಿದ್ದಾರೆ. ಶೇ. 11ರಷ್ಟು ನ್ಯಾಯಾಧೀಶರು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವರಾಗಿದ್ದಾರೆ ಎಂದು ಕಾನೂನು ಸಚಿವಾಲಯ ಹೇಳಿದೆ.
ಇದನ್ನು ಓದಿದ್ದೀರಾ? ಬಹುಸಂಖ್ಯಾತರ ಇಚ್ಛೆಯಂತೆ ದೇಶ, ಕಾನೂನು ನಡೆಯುತ್ತದೆ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ!
ಸುಪ್ರೀಂ ಕೋರ್ಟ್‌ನಲ್ಲಿ 69 ನ್ಯಾಯಾಧೀಶರನ್ನು ನೇಮಕ ಮಾಡಲಾಗಿದ್ದರೂ, 2014ರಿಂದ ದೇಶಾದ್ಯಂತ ಹೈಕೋರ್ಟ್‌ಗಳಲ್ಲಿ 1,173 ಜನರನ್ನು ನೇಮಕ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಆದರೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರಲ್ಲಿ ಯಾವುದೇ ಜಾತಿ ಅಥವಾ ವರ್ಗದ ವ್ಯಕ್ತಿಗಳ ಪ್ರಾತಿನಿಧ್ಯದ ವರ್ಗವಾರು ದತ್ತಾಂಶ ಲಭ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.
“ಭಾರತದ ಸಂವಿಧಾನದ 124, 217 ಮತ್ತು 224ನೇ ವಿಧಿಗಳ ಅಡಿಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕಾತಿಯನ್ನು ಮಾಡಲಾಗುತ್ತದೆ. ಇದರಡಿ ಯಾವುದೇ ಜಾತಿ ಅಥವಾ ವರ್ಗದ ವ್ಯಕ್ತಿಗಳಿಗೆ ಮೀಸಲಾತಿ ಇರುವುದಿಲ್ಲ” ಎಂದು ಸಚಿವಾಲಯ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಕರ್ನಾಟಕ ಹೈಕೋರ್ಟ್‌ನ ಕೆಲ ನ್ಯಾಯಾಧೀಶರನ್ನು ವರ್ಗಾಯಿಸಿ: ಸುಪ್ರೀಂಗೆ ನೈಜ ಹೋರಾಟಗಾರರ ವೇದಿಕೆ ಮನವಿ
ಆದಾಗ್ಯೂ 2018ರಿಂದ, ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಶಿಫಾರಸು ಮಾಡುವವರು ನಾಮನಿರ್ದೇಶಿತರ ಸಾಮಾಜಿಕ ಹಿನ್ನೆಲೆಯ ವಿವರಗಳನ್ನು ಒದಗಿಸಬೇಕಾಗುತ್ತದೆ. ಆ ಡೇಟಾವನ್ನು ಹಂಚಿಕೊಂಡಿರುವ ಕಾನೂನು ಸಚಿವಾಲಯವು 2018ರಿಂದ 2022ರವರೆಗೆ 540 ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದೆ.
ಈ ಪೈಕಿ 15 ಜನರು ಎಸ್‌ಸಿ ವರ್ಗಕ್ಕೆ, 7 ಜನರು ಎಸ್‌ಟಿಗೆ, 57 ಜನರು ಒಬಿಸಿಗೆ ಮತ್ತು 27 ಜನರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು. ಅಂದರೆ ನೇಮಕಗೊಂಡ ನ್ಯಾಯಾಧೀಶರಲ್ಲಿ ಶೇಕಡ 80ರಷ್ಟು ಜನರು ಮೇಲ್ಜಾತಿಯವರಾಗಿದ್ದಾರೆ.
