ಕೇರಳದಲ್ಲಿ ಸುಮಾರು 81.6 ಲಕ್ಷ ಜನರು ಕ್ಷಯರೋಗದ (ಟಿಬಿ) ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಕೇರಳ ಆರೋಗ್ಯ ಇಲಾಖೆ ಹೇಳಿದೆ. ಕ್ಷಯ ರೋಗವನ್ನು ನಿರ್ಮೂಲನೆ ಮಾಡುವ ಗುರಿಯ ಭಾಗವಾಗಿ ಆರಂಭಿಕ ಪತ್ತೆ ಕಾರ್ಯ ನಡೆಸಿದಾಗ ಈ ಅಂಕಿಅಂಶ ಬೆಳಕಿಗೆ ಬಂದಿದೆ. ಈಗ, ಪೂರ್ವಭಾವಿ ಚಿಕಿತ್ಸಾ ಕ್ರಮಗಳನ್ನು ತೆಗೆದುಕೊಳ್ಳಲು ಅಲ್ಲಿನ ಸರ್ಕಾರ ಯೋಜಿಸುತ್ತಿದೆ.
ಕ್ಷಯ ರೋಗದ ಅಪಾಯವನ್ನು ಎದುರಿಸುತ್ತಿರುವ 81.6 ಲಕ್ಷ ಜನರನ್ನು ಮಧುಮೇಹ, ಮೂತ್ರಪಿಂಡ ಕಾಯಿಲೆ, ಟಿಬಿ ಸೇರಿದಂತೆ ನಾನಾ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿ, ಸಮೀಕ್ಷೆ ಮಾಡಲಾಗಿದೆ. ಇವರಲ್ಲಿ ಹೆಚ್ಚಿನವರು ರೋಗದ ಕೌಟುಂಬಿಕ ಇತಿಹಾಸ ಹೊಂದಿವವರು, ಬುಡಕಟ್ಟು ಮತ್ತು ಕರಾವಳಿ ಪ್ರದೇಶಗಳಂತಹ ಜನದಟ್ಟಣೆ ಪ್ರದೇಶಗಳಲ್ಲಿ ವಾಸಿವವರು ಇದ್ದಾರೆ. ಸಾಮಾಜಿಕ-ಆರ್ಥಿಕವಾಗಿ ಅನನುಕೂಲಕರ ಪ್ರದೇಶಗಳಲ್ಲಿ ವಾಸಿಸುವವರೂ ಗಮನಾರ್ಹ ಸಂಖ್ಯೆಯಲ್ಲಿ ಇದ್ದಾರೆ ಎಂದು ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಟಿಬಿ ಪ್ರಕರಣಗಳು ಇಳಿಕೆಯಾಗುತ್ತಿರುವ ಹೊರತಾಗಿಯೂ, ಶೀಘ್ರದಲ್ಲೇ ಸಂಪೂರ್ಣವಾಗಿ ನಿರ್ಮೂಲನೆಯಾಗುವಂತೆ ತೂರುತ್ತಿಲ್ಲ. ಜಾಗತಿಕ ಕ್ಷಯರೋಗ ವರದಿ 2024ರ ಪ್ರಕಾರ, ಕೇರಳದಲ್ಲಿ ಪ್ರತಿದಿನ ಆರು ಮಂದಿ ಟಿಬಿ ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ವಾರ್ಷಿಕವಾಗಿ 2,123 ಸಾವುಗಳು ಸಂಭವಿಸುತ್ತಿವೆ.
ರಾಜ್ಯ ಸರ್ಕಾರವು ರೋಗದ ಆರಂಭಿಕ ಪತ್ತೆಗಾಗಿನ ಕ್ರಮಗಳನ್ನು ತೀವ್ರಗೊಳಿಸಿದೆ. 2023ರಲ್ಲಿ, 5.44 ಲಕ್ಷ ಜನರನ್ನು ಪರೀಕ್ಷಿಸಿ, 21,500ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ಗುರುತಿಸಲಾಗಿತ್ತು. ರಾಜ್ಯವು ಇತ್ತೀಚೆಗೆ 100 ದಿನಗಳ ಕ್ಷಯರೋಗ ಪತ್ತೆ ಅಭಿಯಾನವನ್ನು ನಡೆಸಿ, 53 ಲಕ್ಷ ಜನರನ್ನು ಪರೀಕ್ಷಿಸಿತ್ತು ಮತ್ತು 5,588 ಪ್ರಕರಣಗಳನ್ನು ಪತ್ತೆಹಚ್ಚಿತ್ತು.
ಈ ವರದಿ ಓದಿದ್ದೀರಾ?: ‘ಸಂಸತ್ತು ಸರ್ವೋಚ್ಚ’ ಎಂದಿದ್ದಾರೆ ಧನಕರ್; ನಿಜಕ್ಕೂ ಯಾವುದು ಶ್ರೇಷ್ಠ ಮತ್ತು ಸರ್ವೋಚ್ಚ?
“ಪಲ್ಮನರಿ ಟಿಬಿ ಹೊಂದಿರುವ ರೋಗಿಯಲ್ಲಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ಆದರೆ, ದುರದೃಷ್ಟವಶಾತ್, ಅನೇಕರು ಸ್ವಯಂ-ಔಷಧಿ ಮಾಡಿಕೊಳ್ಳುತ್ತಾರೆ ಅಥವಾ ರೋಗಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಇದು ರೋಗದ ಹರಡುವಿಕೆಗೆ ಕಾರಣವಾಗುತ್ತದೆ. ಈ ರೋಗಕ್ಕೆ ಪುರುಷರು ಹೆಚ್ಚಾಗಿ ತುತ್ತಾಗುತ್ತಾರೆ. ಅವರು ತಪಾಸಣಾ ಶಿಬಿರಗಳಲ್ಲಿ ಭಾಗಿಯಾಗುವ ಸಾಧ್ಯತೆ ಕಡಿಮೆ ಇರುವುದೂ ಇದಕ್ಕೆ ಕಾರಣ” ಎಂದು WHO ಸಲಹೆಗಾರ್ತಿ ಡಾ. ಅಪರ್ಣ ಮೋಹನ್ ಹೇಳಿದರು. ಒಬ್ಬ ಟಿಬಿ ರೋಗಿಯಿಂದ ವರ್ಷಕ್ಕೆ 15 ಮಂದಿಗೆ ಸೋಂಕು ಹರಡಬಹುದು ಎಂದು ಅವರು ಎಚ್ಚರಿಸಿದ್ದಾರೆ.
ರೋಗವನ್ನು ತೊಡೆದುಹಾಕುವ ಗುರಿಯೊಂದಿಗೆ ನಿರ್ಣಾಯಕ ಹೆಜ್ಜೆ ಇಡಲಾಗುತ್ತಿದೆ. ದುರ್ಬಲ ಸಮುದಾಯಗಳ ಜನರನ್ನು ಪರೀಕ್ಷಿಸಲು ರಾಜ್ಯ ಟಿಬಿ ಘಟಕವು ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ಎಕ್ಸ್-ರೇ ಘಟಕಗಳನ್ನು ತೆರೆಯಲು ಸಿದ್ದತೆ ನಡೆಸುತ್ತಿದೆ. “ಕೇಂದ್ರ ಟಿಬಿ ವಿಭಾಗವು ಪ್ರತಿ ಜಿಲ್ಲೆಗೆ ಎರಡು ಎಕ್ಸ್-ರೇ ಘಟಕಗಳನ್ನು ಒದಗಿಸುತ್ತದೆ. ಸಿಎಸ್ಆರ್ ನಿಧಿಗಳನ್ನು ಬಳಸಿಕೊಂಡು ಹೆಚ್ಚುವರಿ ಸಾಧನಗಳನ್ನು ಖರೀದಿಸಲಾಗುತ್ತಿದೆ” ಎಂದು ರಾಜ್ಯ ಟಿಬಿ ಅಧಿಕಾರಿ ಡಾ. ಕೆ.ಕೆ ರಾಜಾರಾಮ್ ಹೇಳಿದ್ದಾರೆ.