ಮಹಾರಾಷ್ಟ್ರ ರಾಜಧಾನಿ ನಗರಿಯ ಬಾಂದ್ರಾ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ವೊಂದರಲ್ಲಿ ಜನರ ನೂಕುನುಗ್ಗಲಿಂದ ಸಂಭವಿಸಿದ ಕಾಲ್ತುಳಿತದ ದುರ್ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಸದ್ಯ, ಗಾಯಾಳುಗಳನ್ನು ಬಾಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಂದ್ರಾ ಟರ್ಮಿನಸ್ನ ಒಂದನೇ ಪ್ಲಾಟ್ಫಾರ್ಮ್ನಲ್ಲಿ ಈ ಘಟನೆ ಸಂಭವಿಸಿದೆ.
ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಬಂದ ಮಾಹಿತಿ ಪ್ರಕಾರ, ಬಾಂದ್ರಾ ಟರ್ಮಿನಸ್ನ ಪ್ಲಾಟ್ಫಾರ್ಮ್ 1ರಲ್ಲಿ ಬಾಂದ್ರಾ ಗೋರಖ್ಪುರ್ ಎಕ್ಸ್ಪ್ರೆಸ್ ರೈಲಿಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಕಾಯುತ್ತಿದ್ದರು.
ದೀಪಾವಳಿ ಆದ ಕಾರಣ ಊರುಗಳಿಗೆ ಹೋಗಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ರೈಲ್ವೆ ಸ್ಟೇಷನ್ನಲ್ಲಿ ಇದ್ದರು. ರೈಲು ಹತ್ತುವಾಗ ನೂಕುನುಗ್ಗುಲು ತೀವ್ರಗೊಂಡು ಕಾಲ್ತುಳಿತವಾಗಿದೆ. ಇವರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ
ಗಾಯಾಳುಗಳನ್ನು ಶಬೀರ್ ಅಬ್ದುಲ್ ರೆಹಮಾನ್ (40), ಪರಮೇಶ್ವರ್ ಸುಖದರ್ ಗುಪ್ತಾ (28), ರವೀಂದ್ರ ಹರಿಹರ್ ಚುಮಾ (30), ರಾಮಸೇವಕ್ ರವೀಂದ್ರ ಪ್ರಸಾದ್ ಪ್ರಜಾಪತಿ (29), ಸಂಜಯ್ ತಿಲಕ್ರಾಮ್ ಕಂಗಯ್ (27), ದಿವ್ಯಾಂಶು ಯೋಗೇಂದ್ರ ಯಾದವ್ (18), ಮೊಹಮ್ಮದ್ ಶರೀಫ್ ಶೇಖ್ (25), ಇಂದ್ರಜಿತ್ ಸಹಾನಿ (19), ಮತ್ತು ನೂರ್ ಮೊಹಮ್ಮದ್ ಶೇಖರ್ (18) ಎಂದು ಗುರುತಿಸಲಾಗಿದೆ.
ಬಾಂದ್ರಾದಿಂದ ಗೋರಖ್ಪುರಕ್ಕೆ ತೆರಳುತ್ತಿದ್ದ 22921 ಸಂಖ್ಯೆಯ ರೈಲಿನಲ್ಲಿ ಅವಘಡ ಸಂಭವಿಸಿದ ದೃಶ್ಯ ಹರಿದಾಡುತ್ತಿದೆ. ಒಂದನೇ ಪ್ಲಾಟ್ಫಾರ್ಮ್ನ ನೆಲದ ಮೇಲೆ ರಕ್ತದ ಕಲೆಗಳು ಕಾಣಸಿಗುತ್ತಿವೆ. ರೈಲ್ವೆ ಪೊಲೀಸ್ ಮತ್ತು ಇತರ ಪ್ರಯಾಣಿಕರು ಗಾಯಾಳುಗಳಿಗೆ ನೆರವಾಗುತ್ತಿರುವುದನ್ನು ದೃಶ್ಯಗಳಲ್ಲಿ ಕಂಡುಬಂದಿವೆ.
ಮುಂಬೈನ ರೈಲು ನಿಲ್ದಾಣಗಳು ಕಾಲ್ತುಳಿತ ಘಟನೆಗಳಿಗೆ ಕುಖ್ಯಾತಿ ಪಡೆದಿವೆ. ಅಲ್ಲಿಯ ಹೆಚ್ಚಿನ ರೈಲುಗಳು ಸದಾ ಕಿಕ್ಕಿರಿದಿರುತ್ತವೆ. 2017ರ ಘಟನೆಯಲ್ಲಿ 23 ಮಂದಿ ಅಸುನೀಗಿದ್ದರು. ಎಲ್ಫಿನ್ಸ್ಟೋನ್ ರೋಡ್ ರೈಲ್ವೆ ನಿಲ್ದಾಣದ ಕಾಲ್ಸೇತುವೆಯೊಂದರಲ್ಲಿ ನೂಕುನುಗ್ಗಲಿನಿಂದ ಕಾಲ್ತುಳಿತವಾಗಿ 23 ಮಂದಿ ಪ್ರಾಣ ಕಳೆದುಕೊಂಡು, 39 ಮಂದಿಗೆ ಗಾಯಗೊಂಡಿದ್ದರು.
