ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಕಳೆದ 14 ತಿಂಗಳ ಅವಧಿಯಲ್ಲಿ ಒಂಬತ್ತು ಮಹಿಳೆಯರು ಒಂದೇ ರೀತಿಯಲ್ಲಿ ಹತ್ಯೆಗೀಡಾಗಿರುವುದು ಕಂಡುಬಂದಿದೆ. ಸರಣಿ ಹಂತಕರು ಈ ಹತ್ಯೆಗಳನ್ನು ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಜಿಲ್ಲೆಯ ಎರಡು ಪೊಲೀಸ್ ಠಾಣೆಗಳ 25 ಕಿ.ಮೀ ವ್ಯಾಪ್ತಿಯಲ್ಲಿ ಈ ಹತ್ಯೆಗಳು ನಡೆದಿವೆ. ಒಂದೇ ರೀತಿಯಲ್ಲಿ ಹತ್ಯೆಯಾಗಿರುವ ಭೀಕರ ಪ್ರಕರಣಗಳು ಕಂಡುಬಂದಿದ್ದು, ಮಹಿಳೆಯರಲ್ಲಿ ಆತಂಕ ಹೆಚ್ಚಾಗಿದೆ. ಹತ್ಯೆಗೀಡಾದ ಎಲ್ಲ ಮಹಿಳೆಯರು 45ರಿಂದ 55 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಅದಾಗ್ಯೂ, ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಲಾಗಿದೆ. ಇದು, ಸೀರಿಯಲ್ ಕೊಲೆಗಳೇ ಆಗಿರಬಹುದು ಎಂದು ಶಂಕಿಸಲಾಗಿದೆ.
ಕಳೆದ ವರ್ಷ ಜೂನ್‌ನಲ್ಲಿ ಮೊದಲ ಶವ ಪತ್ತೆಯಾಗಿತ್ತು. ಅಂದಿನಿಂದ ಈವರೆಗೆ 9 ಮಹಿಳೆಯರ ಮೃತದೇಹಗಳು ಪತ್ತೆಯಾಗಿವೆ. ಇತ್ತೀಚೆಗೆ, ಜುಲೈ 3ರಂದು ಬರೇಲಿಯ ಶಾಹಿ ಶೀಶ್‌ಗಢ ಪ್ರದೇಶದ ಜಮೀನಿನಲ್ಲಿ 45 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಕಳೆದ ವರ್ಷ ನವೆಂಬರ್ ವೇಳೆಗೆ ಇಂತಹ 8 ಪ್ರಕರಣಗಳು ನಡೆದಿದ್ದವು. ಇದೀಗ, 9ನೇ ಪ್ರಕರಣ ಕಳೆದ ತಿಂಗಳು ನಡೆದಿದೆ. ಇದು, ಸ್ಥಳೀಯ ನಿವಾಸಿಗಳಲ್ಲಿ ತುಂಬಾ ಆತಂಕ ಉಂಟುಮಾಡಿದೆ. ಇತ್ತೀಚೆಗೆ, ಪೊಲೀಸರು ಮೂರವನ್ನು ಬಂಧಿಸಿದ್ದರು. ಆದರೂ, ಕೊಲೆಗಳು ಮುಂದುವರೆದಿವೆ.
“ನಮ್ಮ ತಂಡಗಳು ಈ ಪ್ರಕರಣವನ್ನು ಆರು ತಿಂಗಳಿಂದ ತನಿಖೆ ನಡೆಸುತ್ತಿವೆ. ಕೊಲೆಗಳು ಬಹುತೇಕ ಒಂದೇ ರೀತಿಯಲ್ಲಿ ನಡೆದಿದ್ದು, ಸರಣಿ ಕೊಲೆಗಾರನೇ ಹತ್ಯೆಗಳನ್ನು ಮಾಡಿದ್ದಾನೆ ಎಂಬ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಕೆಲವು ಸುಳಿವುಗಳ ಆಧಾರದ ಮೇಲೆ, ನಾವು ಈಗ ಮೂವರು ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದೇವೆ” ಎಂದು ಉತ್ತರ ಪ್ರದೇಶದ ಡಿಜಿಪಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
“ಒಂದೇ ರೀತಿಯಲ್ಲಿ ಕೊಲೆಗಳು ನಡೆದಿವೆ ಎಂಬುದು ಸ್ಪಷ್ಟವಾಗಿದೆ. ಪ್ರತಿ ಪ್ರಕರಣದಲ್ಲೂ ಮಧ್ಯಾಹ್ನದ ವೇಳೆ ಕತ್ತು ಹಿಸುಕಿ ಹತ್ಯೆಗೈದು, ಜಮೀನಿನಲ್ಲಿ ಶವಗಳನ್ನು ಎಸೆಯಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲವೆಂದು ತಿಳಿದುಬಂದಿದೆ. ಪೊಲೀಸ್ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದೆ” ಎಂದು ಬರೇಲಿ ಎಸ್‌ಎಸ್‌ಪಿ ಅನುರಾಗ್ ಆರ್ಯ ಹೇಳಿದ್ದಾರೆ.
ಬಂಧಿತ ಮೂವರು ಆರೋಪಿಗಳು ನಿಜವಾದ ಅಪರಾಧಿಗಳಲ್ಲ ಎಂದು ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ. ಏಕೆಂದರೆ, ಅವರು ಜೈಲಿನಲ್ಲಿದ್ದಾಗಲೂ ಹತ್ಯೆಗಳು ಮುಂದುವರೆದಿವೆ. ಇತ್ತೀಚೆಗೆ ಜಾಮೀನು ಪಡೆದ ಅಥವಾ ಬಿಡುಗಡೆಯಾದ ಕೈದಿಗಳ ವಿವರಗಳನ್ನು ಹಿರಿಯ ಅಧಿಕಾರಿಗಳು ಈಗ ಪರಿಶೀಲಿಸುತ್ತಿದ್ದಾರೆ. 90 ಹಳ್ಳಿಗಳಲ್ಲಿ ಜನರನ್ನು ವಿಚಾರಣೆ ನಡೆಸಿದ ಬಳಿಕ, ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.