ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಆಯ್ಕೆಯಾದ 230 ಶಾಸಕರ ಪೈಕಿ 90 ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
” 230 ಅಭ್ಯರ್ಥಿಗಳಲ್ಲಿ 90 ವಿಜೇತ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಅದೇ ರೀತಿ 34 ವಿಜೇತ ಅಭ್ಯರ್ಥಿಗಳು ಅಂದರೆ ಸುಮಾರು ಶೇ. 15 ರಷ್ಟು ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ” ಎಂದು ಎಡಿಆರ್ ವರದಿ ಹೇಳುತ್ತದೆ.
ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಈ 90 ಶಾಸಕರಲ್ಲಿ 51 ಮಂದಿ ಬಿಜೆಪಿ, 38 ಕಾಂಗ್ರೆಸ್‌ಗೆ ಸೇರಿದವರು ಮತ್ತು ಒಬ್ಬರು ಭಾರತೀಯ ಆದಿವಾಸಿ ಪಕ್ಷದವರು ಎಂದು ವರದಿಯಲ್ಲಿ ತಿಳಿಸಿದೆ. ಹಿಂದಿನ 2018 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಂಕಿಅಂಶದಲ್ಲಿ ಸ್ವಲ್ಪ ಇಳಿಕೆಯಾಗಿದೆ. 2018 ರಲ್ಲಿ 230 ಶಾಸಕರಲ್ಲಿ 94 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಟ್ಟುವ ಮುನ್ನವೇ ಹೆಣ್ಣು ಜೀವಗಳನ್ನು ಬಲಿ ಪಡೆಯುತ್ತಿರುವ ಅನಾಗರಿಕ ವ್ಯವಸ್ಥೆ
ಮಧ್ಯಪ್ರದೇಶ ರಾಜ್ಯದಲ್ಲಿ ನೂತನವಾಗಿ ಚುನಾಯಿತರಾದ 205 ಶಾಸಕರು(ಶೇ.89) ‘ಕೋಟ್ಯಾಧಿಪತಿಗಳು’. ಈ ಕೋಟ್ಯಾಧಿಪತಿಗಳ ಪೈಕಿ 144 ಮಂದಿ ಬಿಜೆಪಿ ಹಾಗೂ 61 ಮಂದಿ ಕಾಂಗ್ರೆಸ್‌ಗೆ ಸೇರಿದವರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ರಾಜ್ಯದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಾಗಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ 187 ಶಾಸಕರು ಕೋಟ್ಯಾಧಿಪತಿಗಳಾಗಿದ್ದರು.
ಆಯ್ಕೆಯಾದವರಲ್ಲಿ 161 ವಿಜೇತ ಅಭ್ಯರ್ಥಿಗಳು ಪದವೀಧರರು ಅಥವಾ ಶೈಕ್ಷಣಿಕ ಅರ್ಹತೆಗಿಂತ ಹೆಚ್ಚಿನವರು. ಅದೇ ರೀತಿ, 64 ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು 5 ನೇ ತರಗತಿ ಮತ್ತು 12 ನೇ ತರಗತಿಯ ನಡುವೆ ಎಂದು ಘೋಷಿಸಿಕೊಂಡಿದ್ದಾರೆ.
230 ಕ್ಷೇತ್ರಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಗಳಿಸಿದರೆ, ಕಾಂಗ್ರೆಸ್ 66 ಸ್ಥಾನ ಹಾಗೂ ಭಾರತ್ ಆದಿವಾಸಿ ಪಕ್ಷವು ಒಂದು ಸ್ಥಾನವನ್ನು ಗೆದ್ದಿದೆ.