17 ವರ್ಷದ ಬುಡಕಟ್ಟು ಬಾಲಕಿಯೊಬ್ಬಳು ತನ್ನ ತಂದೆಯನ್ನು ಕೊಲ್ಲಲು ಯತ್ನಿಸಿದ ಎಂಟು ಮಂದಿ ಶಸ್ತ್ರಸಜ್ಜಿತ ದಾಳಿಕೋರರ ವಿರುದ್ಧ ಹೋರಾಟ, ತಂದೆಯನ್ನು ರಕ್ಷಿಸಿರುವ ಘಟನೆ ಛತ್ತಿಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ನಡೆದಿದೆ.
ಬಸ್ತಾರ್‌ನ ನಾರಾಯಣಪುರ ಜಿಲ್ಲೆಯ ಜರಗಾಂವ್ ಎಂಬ ಹಳ್ಳಿಯಲ್ಲಿ ದುಷ್ಕರ್ಮಿಗಳ ಗುಂಪೊಂದು ಮನೆಗೆ ನುಗ್ಗಿ, ರೈತನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದೆ. ಈ ವೇಳೆ, ದಾಳಿಕೋರರ ಮೇಲೆರಗಿದ ಹುಡುಗಿ, ದುಷ್ಕರ್ಮಿಗಳೊಂದಿಗೆ ಹೋರಾಡಿ ತನ್ನ ತಂದೆಯನ್ನು ರಕ್ಷಿಸಿದ್ದಾರೆ.
ಆಕೆಯ ಪ್ರತಿದಾಳಿಯಿಂದ ವಿಚಲಿತವಾದ ಗುಂಪು ಸ್ಥಳದಿಂದ ಪರಾರಿಯಾಗಿದೆ. ಹಲ್ಲೆಗೊಳಗಾದ ಬಾಲಕಿಯ ತಂದೆ ಸೋಮಧರ್ ಕೊರ್ರಂ ಅವರ ಎದೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
“ಅವರಲ್ಲಿ ಎಂಟು ಮಂದಿ ಇದ್ದರು. ಅವರು ನಮ್ಮ ಮನೆಯ ಬಾಗಿಲನ್ನು ಬಡಿದರು. ಕಿಟಕಿಯಿಂದ ನೋಡಿದಾಗ, ಅವರೆಲ್ಲರೂ ಮುಖಗವಸನ್ನು ಧರಿಸಿದ್ದರು. ಅವರ ಬಳಿ ಕೊಡಲಿ ಮತ್ತು ಬಂದೂಕು ಇತ್ತು. ನನ್ನ ತಂದೆ ಇದ್ದಾರೆಯೇ ಎಂದು ಕೇಳಿದರು. ನನ್ನ ತಂದೆಗೆ ಅಪಾಯವಿದೆ ಎಂದು ಅರಿವಾಯಿತು. ನನ್ನ ತಂದೆ ಇಲ್ಲವೆಂದು ಹೇಳಿದೆ. ಅವರು ಹೊರಟರು. ಆದರೆ, ಕೆಲವೇ ಕ್ಷಣದಲ್ಲಿ ಮನೆಯೊಳಗೆ ನುಗ್ಗಿದರು. ಒಬ್ಬ ವ್ಯಕ್ತಿ ಕೊಡಲಿಯಿಂದ ನನ್ನ ತಂದೆ ಮೇಲೆ ಹಲ್ಲೆ ಮಾಡುವುದನ್ನು ಕಂಡು ನಾನು ಅಲ್ಲಿಗೆ ಓಡಿ ಹೋದೆ. ಅವರ ಬಳಿಯಿಂದ ಕೊಡಲಿಯನ್ನು ಕಿತ್ತುಕೊಂಡು ದೂರ ಹೋಗುವಂತೆ ಕಿರುಚಿದೆ. ಕಿರುಚಾಟ ಕೇಳಿ ನೆರೆಹೊರೆಯವರು ನಮ್ಮ ಮನೆ ಬಳಿಗೆ ಬರಲಾರಂಭಿಸಿದರು. ಇದನ್ನು ಕಂಡ ದಾಳಿಕೋರರು ಪರಾರಿಯಾದರು” ಎಂದು ಘಟನೆ ಬಗ್ಗೆ ಬಾಲಕಿ ವಿವರಿಸಿದ್ದಾಳೆ.
“ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿ, ಆಂಬ್ಯುಲೆನ್ಸ್‌ನಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದೆವು. ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅವರ ಆರೋಗ್ಯ ಸುಧಾರಿಸುತ್ತಿದೆ. ನನ್ನ ತಂದೆ ಸರಳ ರೈತ. ನಮಗೆ ಈ ಹಿಂದೆ ಯಾವುದೇ ಬೆದರಿಕೆ ಇರಲಿಲ್ಲ. ಈ ದಾಳಿಯಿಂದ ಆತಂಕಗೊಂಡಿದ್ದೇವೆ” ಎಂದು ಬಾಲಕಿ ಹೇಳಿದ್ದಾಳೆ.
ನಾರಾಯಣಪುರ ಎಸ್‌ಪಿ ಪ್ರಭಾತ್ ಸಿಂಗ್ ಮಾತನಾಡಿ, “ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ನಾವು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.