ಇಸ್ರೇಲ್‌ನಲ್ಲಿ ಇದೇ ಅಕ್ಟೋಬರ್ 27ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ದೇಶದ 26ನೇ ನೆಸೆಟ್ (Knesset- ಸಂಸತ್ತು) ರಚನೆಗಾಗಿ ಮತದಾನ ನಡೆಯಲಿದೆ. ದೀರ್ಘಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಬೆಂಜಮಿನ್ ನೆತನ್ಯಾಹು ಮತ್ತೊಮ್ಮೆ ಅಧಿಕಾರಕ್ಕೆ ಮರಳಲು ಪ್ರಯತ್ನಿಸುತ್ತಿದ್ದರೆ, ಅವರ ನೇತೃತ್ವದ ಲಿಕುಡ್ ಪಕ್ಷ ಮತ್ತು ಬಲಪಂಥೀಯ ಮೈತ್ರಿಕೂಟಕ್ಕೆ ವಿರೋಧ ಪಕ್ಷಗಳ ಒಕ್ಕೂಟದಿಂದ ತೀವ್ರ ಪೈಪೋಟಿ ಎದುರಾಗಿದೆ.
ಗಾಜಾ ಯುದ್ಧ, ಲೆಬನಾನ್ ಮತ್ತು ಇರಾನ್‌ನೊಂದಿಗಿನ ಸಂಘರ್ಷಗಳು, 2023ರ ಅಕ್ಟೋಬರ್ 7ರ ದಾಳಿಗೆ ಸಂಬಂಧಿಸಿದ ಭದ್ರತಾ ವೈಫಲ್ಯಗಳು, ನ್ಯಾಯಾಂಗ ಸುಧಾರಣೆ ವಿವಾದ ಹಾಗೂ ಜೀವನ ವೆಚ್ಚದ ಏರಿಕೆ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಚುನಾವಣಾ ಪೂರ್ವ ಸಮೀಕ್ಷಾ ವರದಿಗಳ ಪ್ರಕಾರ, ಸದ್ಯಕ್ಕೆ ಯಾವುದೇ ಮೈತ್ರಿಕೂಟವು 120 ಸದಸ್ಯ ಬಲದ ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಪಡೆಯುವ ಸ್ಥಿತಿಯಲ್ಲಿಲ್ಲ ಎನ್ನಲಾಗಿದೆ.
73 ಲಕ್ಷ ಮತದಾರರು, ಬಹುಮತಕ್ಕೆ 61 ಸ್ಥಾನಗಳು
ಇಸ್ರೇಲ್‌ನ ಕೇಂದ್ರ ಚುನಾವಣಾ ಸಮಿತಿಯ ಪ್ರಕಾರ, 18 ವರ್ಷ ಮೇಲ್ಪಟ್ಟ ಸುಮಾರು 73 ಲಕ್ಷ ನಾಗರಿಕರು ಮತದಾನಕ್ಕೆ ಅರ್ಹರಾಗಿದ್ದಾರೆ. ಬಹುತೇಕ ಮತಗಟ್ಟೆಗಳು ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸಲಿವೆ. ಅರ್ಹ ಇಸ್ರೇಲಿ ನಾಗರಿಕರು ಮತ ಚಲಾಯಿಸಬಹುದು. ಮತಗಟ್ಟೆಯಲ್ಲಿ ತಮಗೆ ಬೇಕಾದ ಪಕ್ಷದ ಹೆಸರಿನ ಅಥವಾ ಗುರುತಿನ ಚೀಟಿಯನ್ನು ಆಯ್ಕೆ ಮಾಡಿ ಮತಪೆಟ್ಟಿಗೆಯಲ್ಲಿ ಹಾಕುತ್ತಾರೆ. ಮತದಾನ ಮುಕ್ತಾಯದ ಸಮಯದಲ್ಲಿ ಸರದಿಯಲ್ಲಿ ನಿಂತಿರುವವರಿಗೂ ಮತ ಚಲಾಯಿಸಲು ಅವಕಾಶವಿರುತ್ತದೆ.
ಇಸ್ರೇಲ್‌ನಲ್ಲಿ ಮತದಾರರು ನೇರವಾಗಿ ಪ್ರಧಾನಿಯನ್ನು ಆಯ್ಕೆ ಮಾಡುವುದಿಲ್ಲ. ಬದಲಾಗಿ, ರಾಜಕೀಯ ಪಕ್ಷಗಳಿಗೆ ಮತ ಹಾಕುತ್ತಾರೆ. ಪಕ್ಷಗಳು ಪಡೆದ ಮತಗಳ ಪ್ರಮಾಣಕ್ಕೆ ಅನುಗುಣವಾಗಿ ಸಂಸತ್ತಿನ ಸ್ಥಾನಗಳನ್ನು ಹಂಚಲಾಗುತ್ತದೆ. ಒಟ್ಟು 120 ಸ್ಥಾನಗಳ ಪೈಕಿ ಸರ್ಕಾರ ರಚಿಸಲು ಕನಿಷ್ಠ 61 ಸ್ಥಾನಗಳ ಬೆಂಬಲ ಅಗತ್ಯ. ಯಾವುದೇ ಪಕ್ಷ ಇದುವರೆಗೆ ಸ್ವಂತ ಬಲದಿಂದ ಈ ಬಹುಮತ ಸಾಧಿಸಿಲ್ಲ. ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವೇ ಸರ್ಕಾರ ರಚಿಸುತ್ತದೆ ಎಂಬ ಖಾತರಿಯೂ ಇಲ್ಲ. ಪಕ್ಷಗಳು ಚುನಾವಣೆಯ ಬಳಿಕ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಬೇಕು. ಶೇ.3.25ರ ಕನಿಷ್ಠ ಮತಗಳ ಮಿತಿಯನ್ನು ದಾಟಿದ ಪಕ್ಷಗಳಿಗೆ ಮಾತ್ರ ಸಂಸತ್ತಿನಲ್ಲಿ ಸ್ಥಾನ ಪಡೆಯಲು ಅವಕಾಶವಿದೆ.
ಯಾರಿಗೆ ಮತದಾನದ ಹಕ್ಕಿಲ್ಲ?
ಇಸ್ರೇಲಿ ಪೌರತ್ವವಿಲ್ಲದ ಕಾರಣ ಗಾಜಾದಲ್ಲಿರುವ ಪ್ಯಾಲೆಸ್ತೀನಿಯರು ಇಸ್ರೇಲ್ ಸಂಸತ್ತಿನ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವಿಲ್ಲ. ಇಸ್ರೇಲಿ ಪೌರತ್ವವಿಲ್ಲದ ವೆಸ್ಟ್ ಬ್ಯಾಂಕ್‌ನ ಪ್ಯಾಲೆಸ್ತೀನಿಯರು ಇಸ್ರೇಲ್ ಚುನಾವಣೆಯಲ್ಲಿ ಮತ ಚಲಾಯಿಸಲಾರರು. ಇಸ್ರೇಲಿ ಪೌರತ್ವದ ಬದಲು ಶಾಶ್ವತ ನಿವಾಸಿ ಸ್ಥಾನಮಾನ ಹೊಂದಿರುವುದರಿಂದ ಪೂರ್ವ ಜೆರುಸಲೇಮ್‌ನ ಬಹುತೇಕ ಪ್ಯಾಲೆಸ್ತೀನಿಯರು ಸಂಸತ್ತಿನ ಚುನಾವಣೆಯಲ್ಲಿ ಮತ ಹಾಕಲು ಸಾಧ್ಯವಿಲ್ಲ. ಆದರೆ ಅರ್ಹತೆ ಇದ್ದರೆ ಸ್ಥಳೀಯ ನಗರಸಭೆ ಚುನಾವಣೆಯಲ್ಲಿ ಮತ ಹಾಕಬಹುದು. ವಿದೇಶದಲ್ಲಿರುವ ಇಸ್ರೇಲಿ ನಾಗರಿಕರು ವಿದೇಶದಿಂದಲೇ ಮತ ಹಾಕಲು ಸಾಧ್ಯವಿಲ್ಲ. ಅಧಿಕೃತ ವಿದೇಶಿ ಸೇವೆಯಲ್ಲಿರುವ ಕೆಲವರಿಗೆ ಮಾತ್ರ ವಿಶೇಷ ವ್ಯವಸ್ಥೆ ಇದೆ.
7 ವರ್ಷಗಳಲ್ಲಿ 6ನೇ ಚುನಾವಣೆ
ಅಕ್ಟೋಬರ್ 27ರ ಚುನಾವಣೆ 2019ರಿಂದ ಇಸ್ರೇಲ್‌ನಲ್ಲಿ ನಡೆಯುತ್ತಿರುವ ಆರನೇ ಸಾರ್ವತ್ರಿಕ ಚುನಾವಣೆಯಾಗಿದೆ. 2019ರಲ್ಲಿ ನೆತನ್ಯಾಹು ಅವರ ಲಿಕುಡ್ ಮತ್ತು ಬೆನ್ನಿ ಗಾಂಟ್ಜ್ ಅವರ ಬ್ಲೂ ಆ್ಯಂಡ್ ವೈಟ್ ಪಕ್ಷಗಳು ಸಮಾನ ಸ್ಥಾನಗಳನ್ನು ಪಡೆದಿದ್ದವು. ನಂತರದ ಚುನಾವಣೆಗಳಲ್ಲಿಯೂ ಯಾವುದೇ ಬಣಕ್ಕೆ ಸ್ಥಿರ ಬಹುಮತ ದೊರೆಯದೆ ರಾಜಕೀಯ ಅಸ್ಥಿರತೆ ಮುಂದುವರಿದಿತ್ತು.
2021ರಲ್ಲಿ ನಫ್ತಾಲಿ ಬೆನೆಟ್ ಮತ್ತು ಯೈರ್ ಲಪಿಡ್ ನೇತೃತ್ವದ ಎಂಟು ಪಕ್ಷಗಳ ಮೈತ್ರಿ ನೆತನ್ಯಾಹು ಅವರ 12 ವರ್ಷಗಳ ನಿರಂತರ ಆಡಳಿತಕ್ಕೆ ಅಂತ್ಯ ಹಾಡಿತ್ತು. ಆದರೆ ಆ ಸರ್ಕಾರವೂ ಒಂದು ವರ್ಷದೊಳಗೆ ಪತನಗೊಂಡಿತು. 2022ರ ನವೆಂಬರ್‌ನಲ್ಲಿ ನೆತನ್ಯಾಹು ಮತ್ತೆ ಪ್ರಧಾನಿಯಾದರು.
ಈ ಬಾರಿ ಮತ್ತೆ ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯದಿದ್ದರೆ, ಸರ್ಕಾರ ರಚನೆಗಾಗಿ ದೀರ್ಘ ಮಾತುಕತೆ ನಡೆಯುವ ಸಾಧ್ಯತೆಯಿದೆ. ಚುನಾವಣೆಯ ನಂತರ ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸುವವರೆಗೂ ನೆತನ್ಯಾಹು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.
ನೆತನ್ಯಾಹುಗೆ ಭ್ರಷ್ಟಾಚಾರ ಪ್ರಕರಣದ ಸವಾಲು
ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲ ಪ್ರಧಾನಿಯಾಗಿರುವ ನೆತನ್ಯಾಹು ಮೂರು ಪ್ರತ್ಯೇಕ ಅವಧಿಗಳಲ್ಲಿ ಒಟ್ಟು ಸುಮಾರು 19 ವರ್ಷ ಅಧಿಕಾರದಲ್ಲಿದ್ದಾರೆ. ಅವರು ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣಗಳು ಪ್ರಸ್ತುತ ಚುನಾವಣೆಯಲ್ಲಿ ನೆತನ್ಯಾಹು ಅವರಿಗೆ ಬೀಳುವ ಮತಗಳ ಮೇಲೆ ಪರಿಣಾಮ ಬೀರಲಿವೆ ಎನ್ನಲಾಗುತ್ತಿದೆ. ಅವರ ಲಿಕುಡ್ ಪಕ್ಷದೊಂದಿಗೆ ಶಾಸ್, ರಿಲಿಜಿಯಸ್ ಝಯಾನಿಸಂ ಮತ್ತು ಇಟಮಾರ್ ಬೆನ್-ಗ್ವಿರ್ ನೇತೃತ್ವದ ಒಟ್ಜ್ಮಾ ಯೆಹುದಿತ್ ಸೇರಿದಂತೆ ಬಲಪಂಥೀಯ ಪಕ್ಷಗಳು ಮೈತ್ರಿಕೂಟದಲ್ಲಿವೆ.
ಇದಕ್ಕೆ ಪ್ರತಿಯಾಗಿ, ಮಾಜಿ ಪ್ರಧಾನಿಗಳಾದ ನಫ್ತಾಲಿ ಬೆನೆಟ್ ಮತ್ತು ಯೈರ್ ಲಪಿಡ್ ಅವರ ರಾಜಕೀಯ ಬಣಗಳು, ಮಾಜಿ ಸೇನಾ ಮುಖ್ಯಸ್ಥ ಗಾದಿ ಐಸೆನ್‌ಕೋಟ್ ಅವರ ಯಾಶಾರ್ ಪಕ್ಷ, ಅವಿಗ್ದೋರ್ ಲೀಬರ್‌ಮನ್ ಅವರ ಯಿಸ್ರೇಲ್ ಬೆಯ್ಟೇನು ಹಾಗೂ ಯೈರ್ ಗೋಲನ್ ಅವರ ಡೆಮಾಕ್ರಟ್ಸ್ ಪಕ್ಷಗಳು ವಿರೋಧ ಪಕ್ಷಗಳ ರಾಜಕೀಯ ಸಮೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಮತದಾನಕ್ಕೂ ಮುನ್ನ ಪ್ರಮುಖ ಯಹೂದಿ ನೇತೃತ್ವದ ವಿರೋಧ ಪಕ್ಷಗಳು ಪರಸ್ಪರ ದಾಳಿ ಮಾಡದಿರಲು ಮತ್ತು ಚುನಾವಣೆಯ ನಂತರ ಸರ್ಕಾರ ರಚಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ಘೋಷಿಸಿವೆ ಎಂದು ವರದಿಯಾಗಿದೆ.
ಗಾಜಾ ಯುದ್ಧ ಮತ್ತು ಅಕ್ಟೋಬರ್ 7ರ ದಾಳಿಯ ಪರಿಣಾಮ
2023ರ ಅಕ್ಟೋಬರ್ 7ರಂದು ಹಮಾಸ್ ನೇತೃತ್ವದ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದ್ದು, ಸುಮಾರು 250 ಜನರನ್ನು ಒತ್ತೆಯಾಳುಗಳಾಗಿ ಕರೆದೊಯ್ಯಲಾಗಿತ್ತು. ಇದಾದ ಬಳಿಕ ಇಸ್ರೇಲ್ ಗಾಜಾದಲ್ಲಿ ವ್ಯಾಪಕ ಸೈನಿಕ ಕಾರ್ಯಾಚರಣೆ ಆರಂಭಿಸಿತು. ಗಾಜಾದಲ್ಲಿ ಭಾರೀ ಪ್ರಮಾಣದ ಜೀವಹಾನಿ ಮತ್ತು ಮೂಲಸೌಕರ್ಯ ನಾಶಕ್ಕೆ ಕಾರಣವಾದ ಯುದ್ಧವು ಚುನಾವಣೆಯ ಪ್ರಮುಖ ರಾಜಕೀಯ ವಿಷಯವಾಗಿದೆ. ಅಕ್ಟೋಬರ್ 7ರ ಭದ್ರತಾ ವೈಫಲ್ಯಗಳ ಕುರಿತು ಸ್ವತಂತ್ರ ರಾಜ್ಯ ತನಿಖಾ ಆಯೋಗ ರಚಿಸದಿರುವುದಕ್ಕೆ ನೆತನ್ಯಾಹು ಸರ್ಕಾರ ಟೀಕೆ ಎದುರಿಸುತ್ತಿದೆ. ನೆತನ್ಯಾಹು ಅವರು ‘ಸಂಪೂರ್ಣ ವಿಜಯ’ ಸಾಧಿಸುವ ಭರವಸೆ ನೀಡಿದ್ದರೂ, ಹಮಾಸ್ ಮತ್ತು ಹಿಜ್ಬುಲ್ಲಾ ಸಂಘಟನೆಗಳ ಕಾರ್ಯಾಚರಣಾ ಸಾಮರ್ಥ್ಯ ಸಂಪೂರ್ಣವಾಗಿ ಕೊನೆಗೊಂಡಿಲ್ಲ ಎಂಬ ಅಂಶ ತೀವ್ರ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಹಮಾಸ್ ನೆಪ ಮಾತ್ರವಷ್ಟೇ, ಪ್ಯಾಲೆಸ್ತೀನ್ ಇಲ್ಲವಾಗಿಸುವುದು ಇಸ್ರೇಲ್ ಗುರಿ: ಚಿಂತಕ ಶಿವ ಸುಂದರ್
ಇಸ್ರೇಲ್‌ನ ಅಲ್ಟ್ರಾ ಆರ್ಥೊಡಾಕ್ಸ್ ಯಹೂದಿ ಸಮುದಾಯದವರಿಗೆ ಕಡ್ಡಾಯ ಸೇನಾ ಸೇವೆಯಿಂದ ನೀಡಲಾಗುವ ವಿನಾಯಿತಿ ಮತ್ತೊಂದು ಪ್ರಮುಖ ವಿಷಯ. ಧಾರ್ಮಿಕ ಅಧ್ಯಯನದಲ್ಲಿ ತೊಡಗಿರುವವರಿಗೆ ವಿನಾಯಿತಿ ನೀಡುವುದು ಅಗತ್ಯ ಎಂದು ಬೆಂಬಲಿಗರು ವಾದಿಸುತ್ತಾರೆ. ಆದರೆ, ಇತರ ನಾಗರಿಕರು ಸೇನಾ ಸೇವೆಯ ಹೊರೆ ಹೊರುತ್ತಿರುವಾಗ ಒಂದು ಸಮುದಾಯಕ್ಕೆ ವಿನಾಯಿತಿ ನೀಡುವುದು ಅನ್ಯಾಯ ಎಂದು ವಿರೋಧಿಗಳು ಟೀಕಿಸುತ್ತಾರೆ. ಈ ವಿಚಾರ ಸರ್ಕಾರದ ಮೈತ್ರಿಕೂಟದ ಸ್ಥಿರತೆ ಮತ್ತು ಪಕ್ಷಗಳ ನಡುವಿನ ರಾಜಕೀಯ ಹೊಂದಾಣಿಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ನೆತನ್ಯಾಹು ಸರ್ಕಾರದ ನ್ಯಾಯಾಂಗ ಸುಧಾರಣಾ ಪ್ರಸ್ತಾಪಗಳು ದೇಶದಲ್ಲಿ ಹಿಂದೆಯೇ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದ್ದವು. ಜೊತೆಗೆ, ಹೆಚ್ಚುತ್ತಿರುವ ಜೀವನ ವೆಚ್ಚವೂ ಮತದಾರರ ಮೇಲೆ ಪರಿಣಾಮ ಬೀರುತ್ತಿದೆ. 2023ರಿಂದ ಇಸ್ರೇಲ್‌ನ ರಕ್ಷಣಾ ವೆಚ್ಚ ದ್ವಿಗುಣಗೊಂಡಿದ್ದು, ಸಾರ್ವಜನಿಕ ಹಣಕಾಸಿನ ಮೇಲೆ ಒತ್ತಡ ಹೆಚ್ಚಿದೆ ಎಂದು ವರದಿ ತಿಳಿಸಿದೆ. ಬೆಲೆ ಏರಿಕೆ ಮತ್ತು ವೇತನದ ಬೆಳವಣಿಗೆಯ ನಡುವಿನ ಅಂತರವೂ ಚುನಾವಣೆಯಲ್ಲಿ ನಿರ್ಣಾಯಕವಾಗಲಿದೆ.
ಒಟ್ಟಾರೆ, ಇಸ್ರೇಲ್ ಚುನಾವಣೆಯ ಫಲಿತಾಂಶವು ನೆತನ್ಯಾಹು ಅವರ ರಾಜಕೀಯ ಭವಿಷ್ಯವನ್ನು ಮಾತ್ರವಲ್ಲದೆ, ಗಾಜಾ ಯುದ್ಧದ ಮುಂದಿನ ದಿಕ್ಕು, ದೇಶದ ಭದ್ರತಾ ನೀತಿ, ನ್ಯಾಯಾಂಗ ಸುಧಾರಣೆ ಮತ್ತು ಪ್ರಾದೇಶಿಕ ರಾಜತಾಂತ್ರಿಕ ಸಂಬಂಧಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.





