ಖ್ಯಾತ ಉದ್ಯಮಿ ಹಾಗೂ ಕೋಟ್ಯಂತರ ಭಾರತೀಯರು ಗೌರವದಿಂದ ಕಾಣುತ್ತಿದ್ದ ರತನ್ ಟಾಟಾ ಅವರು ಟಾಟಾ ಸಮೂಹ ಸಂಸ್ಥೆಯನ್ನು 1991ರಿಂದ 2012ರವರೆಗೆ ಮುನ್ನಡೆಸಿದ್ದರು. ಅಸಲಿಗೆ, ಅವರಿಗೆ 35 ವರ್ಷ ವಯಸ್ಸಾಗಿದ್ದಾಗಲೇ ಕಂಪನಿಯಲ್ಲಿ ಕೆಲವು ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು.
ಆಡಳಿತ ಚುಕ್ಕಾಣಿಯನ್ನು ಹಿಡಿದಿದ್ದು 1991ರಲ್ಲಿ. ಕಂಪನಿಯ ಆಡಳಿತವನ್ನು ಹಿಡಿಯುವ ಹೊತ್ತಿಗೆ ಕಂಪನಿಯ ಕೆಲವಾರು ಹುದ್ದೆಗಳಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ, ಕಂಪನಿಯ ಆಳ, ಅಗಲ, ವ್ಯವಹಾರಗಳ ಆಮೂಲಾಗ್ರ ವಿಚಾರಗಳನ್ನು ತಿಳಿದುಕೊಂಡಿದ್ದ ಟಾಟಾ, ತಮ್ಮ ವಂಶಜರು ಕಟ್ಟಿದ ಸಾಮ್ರಾಜ್ಯವನ್ನು ಮತ್ತಷ್ಟು ದೊಡ್ಡದಾಗಿ ಬೆಳೆಸುವ ಛಲ ಹೊಂದಿದ್ದರು. ಅವರ ಆ ಪ್ರಯತ್ನದ ಫಲವಾಗಿ, 4 ಸಾವಿರ ಕೋಟಿ ರೂ. ಮೌಲ್ಯದಿಂದ 8 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಿದರು.
ಈ ಸುದ್ದಿ ಓದಿದ್ದೀರಾ? ಖ್ಯಾತ ಉದ್ಯಮಿ ರತನ್ ಟಾಟಾ ನಿಧನ
ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು. ಅಷ್ಟಲ್ಲದೆ ಹುಟ್ಟು ಶ್ರೀಮಂತನಾಗಿದ್ದರೂ ಸರಳತೆ, ಸಹಾನುಭೂತಿಯ ನಡವಳಿಕೆಯಿಂದ ಹೆಸರುವಾಸಿಯಾಗಿದ್ದರು. ದೇಶದ ಆರ್ಥಿಕತೆ ಮತ್ತು ವ್ಯಾಪಾರಕ್ಕೆ ಅಪಾರ ಕೊಡುಗೆಗಳನ್ನು ರತನ್ ಟಾಟಾ ನೀಡಿದ್ದಾರೆ.
ರಾಷ್ಟ್ರ ನಿರ್ಮಾಣದಲ್ಲಿ ಮಹಾನ್ ಹೆಜ್ಜೆಗುರುತುಗಳನ್ನು ಅವರು ಉಳಿಸಿದ್ದಾರೆ. 1991ರಲ್ಲಿ ಟಾಟಾ ಸನ್ಸ್‌ನ ಚೇರ್ಮನ್ ಆಗಿದ್ದ ರತನ್ ಟಾಟಾ, 2012ರವರೆಗೂ ಈ ಹುದ್ದೆಯಲ್ಲಿದ್ದರು. ತಮ್ಮ ಮುತ್ತಜ್ಜ ಸ್ಥಾಪನೆ ಮಾಡಿದ್ದ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಯಶಸ್ಸಿನ ಪಥದಲ್ಲಿ ಸಾಗಿಸಿದ್ದರು. 1996ರಲ್ಲಿ ಟಾಟಾ ಟೆಲಿಸರ್ವೀಸಸ್ ಕಂಪನಿ ಸ್ಥಾಪನೆ ಮಾಡಿದ್ದರೆ, 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿಯನ್ನು ಸಾರ್ವಜನಿಕ ಪಾಲುದಾರ ಕಂಪನಿಯನ್ನಾಗಿ ಮಾಡಿದ್ದರು.
