ರಸ್ತೆ ಅಪಘಾತದಲ್ಲಿ ಮೃತರ ಅಥವಾ ಸಂತ್ರಸ್ತರ ವಯಸ್ಸನ್ನು ನಿರ್ಧರಿಸಲು ಆಧಾರ್ ಕಾರ್ಡ್ ಮಾನ್ಯ ದಾಖಲೆಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗೆಯೇ ರಸ್ತೆ ಅಪಘಾತದಲ್ಲಿ ಮೃತರ ವಯಸ್ಸು ನಿರ್ಧರಿಸಲು ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಪರಿಗಣಿಸಲು ಅವಕಾಶ ನೀಡಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಗೊಳಿಸಿದೆ.
ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015ರ ಸೆಕ್ಷನ್ 94ರ ಅಡಿಯಲ್ಲಿ ಶಾಲೆಯಲ್ಲಿ ನೀಡಿದ ಪ್ರಮಾಣಪತ್ರದಲ್ಲಿ ನಮೂದಿಸಲಾದ ಜನ್ಮ ದಿನಾಂಕದ ಆಧಾರದಲ್ಲಿ ಮೃತರ ವಯಸ್ಸನ್ನು ನಿರ್ಧರಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ಪೀಠ ಹೇಳಿದೆ.
“ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 2023ರ ಅದರ ಸುತ್ತೋಲೆ ಸಂಖ್ಯೆ 8ರ ಮೂಲಕ ಡಿಸೆಂಬರ್ 20, 2018ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಸುತ್ತೋಲೆ ಉಲ್ಲೇಖಿಸಿ ಆಧಾರ್ ಕಾರ್ಡ್ ಗುರುತಿನ ಪುರಾವೆಯಾಗಿ ಬಳಸಬಹುದು, ಆದರೆ ಜನ್ಮ ದಿನಾಂಕದ ಪುರಾವೆಯಲ್ಲ” ಎಂದು ಹೇಳಿರುವುದಾಗಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ನ್ಯಾಯದೇವತೆ ಪ್ರತಿಮೆ,ಸುಪ್ರೀಂ ಕೋರ್ಟ್ ಲಾಂಛನದಲ್ಲಿ ಏಕಪಕ್ಷೀಯ ಬದಲಾವಣೆ: ಎಸ್‌ಸಿಬಿಎ ಆಕ್ಷೇಪ
ಈ ಮೂಲಕ ಸುಪ್ರೀಂ ಕೋರ್ಟ್ ಪ್ರಮಾಣಪತ್ರದ ಆಧಾರದಲ್ಲಿ ಮೃತರ ವಯಸ್ಸನ್ನು ನಿರ್ಧರಿಸಿದ ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಯ (ಎಂಎಸಿಟಿ) ತೀರ್ಪನ್ನು ಎತ್ತಿ ಹಿಡಿದಿದೆ.
2015ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಎಂಎಸಿಟಿ ಮೃತರ ಕುಟುಂಬಕ್ಕೆ 19.35 ಲಕ್ಷ ರೂಪಾಯಿ ಪರಿಹಾರವನ್ನು ನೀಡಿತ್ತು. ಆದರೆ ಪರಿಹಾರವನ್ನು ನಿರ್ಧರಿಸುವಾಗ ಎಂಎಸಿಟಿಯ ವಯಸ್ಸಿನ ಗುಣಕವನ್ನು ತಪ್ಪಾಗಿ ಅನ್ವಯಿಸಿದೆ ಎಂದು ಗಮನಿಸಿದ ನಂತರ ಹೈಕೋರ್ಟ್ ಪರಿಹಾರವನ್ನು 9.22 ಲಕ್ಷ ರೂಪಾಯಿಗೆ ಇಳಿಸಿತ್ತು.
ಮೃತನ ವಯಸ್ಸನ್ನು 47 ವರ್ಷ ಎಂದು ಲೆಕ್ಕ ಹಾಕಲು ಆತನ ಆಧಾರ್ ಕಾರ್ಡ್ ಅನ್ನು ಹೈಕೋರ್ಟ್ ಅವಲಂಬಿಸಿತ್ತು. ಆದರೆ ಶಾಲೆಯ ಪ್ರಮಾಣ ಪತ್ರದ ಪ್ರಕಾರ ಮೃತ ವ್ಯಕ್ತಿಯ ವಯಸ್ಸು ಆತನ ಮರಣದ ವೇಳೆಗೆ 45 ವರ್ಷ ಎಂದು ಕುಟುಂಬವು ಹೈಕೋರ್ಟ್‌ನಲ್ಲಿ ವಾದಿಸಿದೆ. ಇದೀಗ ವಯಸ್ಸನ್ನು ನಿರ್ಧರಿಸಲು ಆಧಾರ್ ಕಾರ್ಡ್ ಮಾನ್ಯ ದಾಖಲೆಯಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಮೃತರ ಕುಟುಂಬಕ್ಕೆ ಹೆಚ್ಚಿನ ಹಣಕಾಸು ಪರಿಹಾರ ಲಭ್ಯವಾಗಿದೆ.
