ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆಯ ಒಂದು ಭಾಗವನ್ನು ಸ್ವಚ್ಛಗೊಳಿಸುತ್ತಿದ್ದ ಐವರು ಪೌರ ಕಾರ್ಮಿಕರು ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ಹರಿಯಾಣದ ನುಹ್ ಜಿಲ್ಲೆಯ ಇಬ್ರಾಹಿಂ ಬಾಸ್ ಗ್ರಾಮದ ಬಳಿ ನಡೆದಿದೆ.
ಶನಿವಾರ ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಎಕ್ಸ್‌ಪ್ರೆಸ್‌ವೇನ ಒಂದು ಭಾಗವನ್ನು ಪೌರ ಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ, ವೇಗವಾಗಿ ಬಂದ ಪಿಕಪ್ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಆರು ಮಂದಿ ಮಹಿಳೆಯರು ಸಾವನ್ನಪ್ಪಿದ್ದಾರೆ. ಐವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತ ಎಸಗಿರುವ ವಾಹನ ಚಾಲಕ, ವಾಹನವನ್ನು ಸ್ಥಳದಲ್ಲೇ ಬಿಟ್ಟು, ಪರಾರಿಯಾಗಿದ್ದಾನೆ. ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡವರನ್ನು ಅಸ್ಪತ್ರೆಗೆ ಕಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ ಎಂದು ಫಿರೋಜ್‌ಪುರ್ ಝಿರ್ಕಾದ ಡಿಎಸ್‌ಪಿ ಅಜೈಬ್ ಸಿಂಗ್ ಹೇಳಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಸಾವನ್ನಪ್ಪಿದ ಕಾರ್ಮಿಕರಲ್ಲಿ ಐವರು ಖೇರಿ ಕಲಾನ್ ಗ್ರಾಮಕ್ಕೆ ಸೇರಿದವರು. ಒಬ್ಬರು ಜಿಮ್ರಾವತ್ ಗ್ರಾಮಕ್ಕೆ ಸೇರಿದವರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಬರಪೀಡಿತ ಪ್ರದೇಶದಲ್ಲಿ ಕೃಷಿ ಪುನರುಜ್ಜೀವನಕ್ಕೆ ನಾಂದಿ ಹಾಡಿದ ವಿಧವೆಯರು, ಒಂಟಿ ಮಹಿಳೆಯರು
ಅಪಘಾತಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. “ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಘಟನೆ ಬಗ್ಗೆ ನಿಖರ ಮಾಹಿತಿಗಾಗಿ ಎಲ್ಲ ಸಂಭಾವ್ಯ ಪುರಾವೆಗಳನ್ನು ಸಂಗ್ರಹಿಸುತ್ತಿದ್ದೇವೆ. ಎಲ್ಲ ಆಯಾಮಗಳಲ್ಲಿಯೂ ಕೂಲಂಕಷವಾಗಿ ತನಿಖೆ ನಡೆಸುತ್ತೇವೆ” ಎಂದು ಪರಿಶೀಲಿಸಲಾಗುತ್ತಿದೆ” ಎಂದು ಫಿರೋಜ್‌ಪುರ್ ಝಿರ್ಕಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅಮನ್ ಸಿಂಗ್ ಹೇಳಿದ್ದಾರೆ.
ದೆಹಲಿಯಿಂದ ಅಲ್ವಾರ್ ಕಡೆಗೆ ಅತಿ ವೇಗವಾಗಿ ಹೋಗುತ್ತಿದ್ದ ಪಿಕಪ್ ವ್ಯಾನ್, ಚಾಲಕನ ನಿಯಂತ್ರಣ ಕಳೆದುಕೊಂಡು ಕಾರ್ಮಿಕರ ಗುಂಪಿನ ಮೇಲೆ ನುಗ್ಗಿದೆ ಎಂದು ಹೇಳಲಾಗಿದೆ.
ಈ ಘಟನೆಯು ಹೈ-ಸ್ಪೀಡ್ ಎಕ್ಸ್‌ಪ್ರೆಸ್‌ವೇಗಳಲ್ಲಿ ಕೆಲಸ ಮಾಡುವ ನಿರ್ವಹಣಾ ಸಿಬ್ಬಂದಿಯ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಇದು ಉತ್ತಮ ರಕ್ಷಣಾತ್ಮಕ ಪ್ರೋಟೋಕಾಲ್‌ಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.