ನಟಿ ರಶ್ಮಿಕಾ ಮಂದಣ್ಣ ಅವರನ್ನು ಚಿತ್ರವನ್ನು ಬಳಸಿ, ಡೀಪ್‌ಫೇಕ್ ವಿಡಿಯೋ ಹರಿಬಿಟ್ಟಿದ್ದ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ವಿಡಿಯೋವೊಂದನ್ನು ರಶ್ಮಿಕಾ ಅವರ ಮುಖದೊಂದಿಗೆ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ವಿಡಿಯೋ ವೈರಲ್ ಆಗಿ, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ, ಆರೋಪಿಯನ್ನು ಬಂಧಿಸಲಾಗಿದೆ.
ವೈರಲ್ ಆಗಿದ್ದ ವಿಡಿಯೋದ ಅಸಲಿ ವಿಡಿಯೋ ಬ್ರಿಟಿಷ್-ಭಾರತೀಯ ಪ್ರಜೆ ಜರಾ ಪಟೇಲ್ ಅವರದ್ದು ಎಂಬುದು ಆಗಲೇ ಸ್ಪಷ್ಟವಾಗಿತ್ತು. ಕಪ್ಪು ಉಡುಪಿನಲ್ಲಿ ಲಿಫ್ಟ್‌ಗೆ ಅವರು ತೆರಳುವ ವಿಡಿಯೋ ಅವರದ್ದಾಗಿತ್ತು. ಆದರೆ, ಆ ವಿಡಿಯೋವನ್ನು ಡೀಪ್‌ಫೇಕ್ ತಂತ್ರಜ್ಞಾನದ ರಶ್ಮಿಕಾ ಅವರ ಮುಖದೊಂದಿಗೆ ತಿರುಚಿ ಹರಿಬಿಡಲಾಗಿತ್ತು.
ತಮ್ಮದಲ್ಲದ ತಿರುಚಿದ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದ ರಶ್ಮಿಕಾ ‘ಅತ್ಯಂತ ಭಯಾನಕ’ ಎಂದಿದ್ದರು. “ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ,. ಇಂತಹ ದುರುಪಯೋಗದಿಂದ ವ್ಯಕ್ತಿತ್ವಗಳಿಗೆ ಹಾನಿಯಾಗುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರಿಗೆ ಇಂತಹ ಪರಿಸ್ಥಿತಿ ಎದುರಾಗುವುದು ನಿಜಕ್ಕೂ ಅತ್ಯಂತ ಭಯಾನಕ” ಎಂದು ಅವರು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ?: ಆರ್‌ಎಸ್‌ಎಸ್‌ಗೆ ಹಣ ನೀಡುವ ಎನ್‌ಆರ್‌ಐ ಬ್ರಾಹ್ಮಣರು ಮಾಂಸ ತಿನ್ನುತ್ತಿಲ್ಲವೇ? : ‘ಅನ್ನಪೂರ್ಣಿ’ ವಿವಾದದ ಬಗ್ಗೆ ಗಾಯಕ ಟಿ.ಎಂ.ಕೃಷ್ಣ
ಇತ್ತೀಚೆಗೆ, ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು “ಎಲ್ಲ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ತಮ್ಮ ಪ್ಲಾಟ್‌ಫಾರ್ಮ್‌ಗಳಿಂದ ತಪ್ಪು ಮಾಹಿತಿಯನ್ನು ಗುರುತಿಸಲು ಮತ್ತು ತೆಗೆದುಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ” ಎಂದು ಹೇಳಿದ್ದಾರೆ.
“ಡೀಪ್‌ಫೇಕ್ ನಮಗೆಲ್ಲರಿಗೂ ದೊಡ್ಡ ಸಮಸ್ಯೆಯಾಗಿದೆ. ನಾವು ಎಲ್ಲ ದೊಡ್ಡ ಸಾಮಾಜಿಕ ಮಾಧ್ಯಮ ಫಾರ್ಮ್‌ಗಳಿಗೆ ನೋಟಿಸ್ ನೀಡಿದ್ದೇವೆ. ಡೀಪ್‌ಫೇಕ್ ಪೋಸ್ಟ್‌ಗಳನ್ನು ಗುರುತಿಸಲು ಮತ್ತು ಅವುಗಳನ್ನು ತೆಗೆದುಹಾಕಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಕ್ರಮ ಕೈಗೊಳ್ಳುವುದಾಗಿ ತಿಳಿಸಿವೆ” ಎಂದು ಅವರು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಮಾತ್ರವಲ್ಲದೆ, ಕತ್ರಿನಾ ಕೈಫ್, ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ ಹಾಗೂ ಸಚಿನ್ ತೆಂಡೂಲ್ಕರ್ ಅವರ ಡೀಪ್‌ಫೇಕ್ ವೀಡಿಯೊಗಳು ಸಹ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಸುದ್ದಿ ಓದಿದ್ದೀರಾ?: ಹೊಂಬಾಳೆಯಿಂದ ‘ರಘುತಾತ’ ಟೀಸರ್ ಬಿಡುಗಡೆ: ‘ಹಿಂದಿ ತೆರಿಯಾದ್ ಪೋಯ’ ಎಂದ ನಾಯಕಿ ಕೀರ್ತಿ ಸುರೇಶ್!