ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಕೇಂದ್ರ ಸರ್ಕಾರವು ಮಾರ್ಚ್ 11ರಂದು ಜಾರಿಗೊಳಿಸಿದ್ದು, ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಈ ನಡುವೆ “ತಮಿಳುನಾಡಿನಲ್ಲಿ ಸಿಎಎ ಜಾರಿ ಮಾಡಬೇಡಿ” ಎಂದು ತಮಿಳು ನಟ, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಮನವಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಇರುವಾಗ ಸಿಎಎ ಜಾರಿಗೊಳಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ನಟ ವಿಜಯ್, “ಪೌರತ್ವ ತಿದ್ದುಪಡಿ ಕಾಯ್ದೆ 2019 ರಂತಹ ಯಾವುದೇ ಕಾನೂನನ್ನು ದೇಶದಲ್ಲಿ ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ನಾವೆಲ್ಲರೂ ಸಹಬಾಳ್ವೆಯಿಂದ ಬಾಳುತ್ತಿರುವಾಗ ಇಂತಹ ಕಾನೂನಿನ ಅಗತ್ಯವಿಲ್ಲ” ಎಂದು ಅಭಿಪ್ರಾಯಿಸಿದ್ದಾರೆ.
ತಮಿಳುನಾಡಿನ ಎಂಕೆ ಸ್ಟಾಲಿನ್ ಸರ್ಕಾರವು ಈ ಸಿಎಎ ಕಾನೂನನ್ನು ಜಾರಿ ಮಾಡಬಾರದು ಎಂದು ಮನವಿ ಮಾಡಿರುವ ನಟ ವಿಜಯ್, “ತಮಿಳುನಾಡಿನಲ್ಲಿ ಈ ಕಾನೂನು ಜಾರಿಯಾಗದಂತೆ ನಾಯಕರುಗಳು ನೋಡಿಕೊಳ್ಳಬೇಕು” ಎಂದು ಟಿವಿಕೆ ಅಧಿಕೃತ ಹೇಳಿಕೆಯಲ್ಲಿ ವಿಜಯ್ ಹೇಳಿದ್ದಾರೆ.
ಡಿಸೆಂಬರ್ 2019ರಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರವು 2024ರ ಮಾರ್ಚ್ 11ರಂದು ಜಾರಿಗೊಳಿಸಿದ್ದು, ವಿಪಕ್ಷಗಳು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಕಾಯ್ದೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಬರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ಪಡೆಯುವ ಅವಕಾಶ ನೀಡುತ್ತದೆ.
2014 ಡಿಸೆಂಬರ್ 31ರೊಳಗೆ ಭಾರತಕ್ಕೆ ಆಗಮಿಸಿದ ಹಿಂದೂ, ಸಿರ್ಖ, ಬೌದ್ಧರು, ಜೈನರು, ಪಾರ್ಸಿಗಳಿಗೆ ಭಾರತದ ಪೌರತ್ವ ಪಡೆಯಲು ಈ ಕಾಯ್ದೆ ಅವಕಾಶ ನೀಡುತ್ತದೆ. ಆದರೆ ನಮ್ಮ ಜಾತ್ಯಾತೀತ ದೇಶದಲ್ಲಿ ಮುಸ್ಲಿಮ್ ಸಮುದಾಯವನ್ನು ಮಾತ್ರ ಈ ಕಾಯ್ದೆಯಲ್ಲಿ ಹೊರಗಿಟ್ಟಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಇನ್ನು ವಿಜಯ್ ಮಾತ್ರವಲ್ಲದೆ ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್, ಎಐಎಂಐಎಂ ಮುಖ್ಯಸ್ಥ ಅಸ್ಸಾದುದ್ದೀನ್ ಓವೈಸಿ, ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಪಿಐಎಂ ಮುಖಂಡ ಸೀತಾರಾಮ್ ಯೆಚೂರಿ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.