ತೃಣಮೂಲ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಡೆರಿಕ್ ಒಬ್ರಿಯಾನ್ ಅವರನ್ನು ವಿದೇಶಿ ಎಂದು ಹೇಳಿಕೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕ್ಷಮೆಯಾಚಿಸಿದ್ದಾರೆ.
ಡೆರಿಕ್ ಒಬ್ರಿಯಾನ್ ಅವರನ್ನು ವಿದೇಶಿ ಎಂದು ಅಜಾಗರುಕತೆಯಿಂದ ಉಚ್ಚರಿಸಿದ್ದಕ್ಕೆ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಡೆರಿಕ್ ಒಬ್ರಿಯಾನ್ ಕೂಡ ಅಧೀರ್ ರಂಜನ್ ಚೌಧರಿ ಅವರ ಕ್ಷಮೆಯನ್ನು ಸ್ವೀಕರಿಸಿದ್ದಾರೆ.
ಗುರುವಾರದಂದು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಅಧೀರ್ ರಂಜನ್ ಚೌಧರಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಡೆರಿಕ್ ಒಬ್ರಿಯನ್ ವಿದೇಶಿಗರು. ಅವರಿಗೆ ಹಲವು ವಿಷಯಗಳು ಗೊತ್ತು. ಅವರನ್ನೇ ಕೇಳಿ ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲರನ್ನೂ ಒಳಗೊಳ್ಳದಿದ್ದರೆ ‘ಗಣರಾಜ್ಯ’ ಹೇಗಾಗುತ್ತದೆ?
ಇಂಡಿಯಾ ಒಕ್ಕೂಟದೊಂದಿಗೆ ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಮಾತುಕತೆಗಳು ಮುರಿದು ಬಿದ್ದಿರುವುದಕ್ಕೆ ಡೆರಿಕ್ ಒಬ್ರಿಯಾನ್ ವಿರುದ್ಧ ಅಧೀರ್ ರಂಜನ್ ಚೌಧರಿ ಆರೋಪ ಮಾಡಿದ್ದರು. ಡೆರಿಕ್ ಅವರು ಕೂಡ ಅಧೀರ್ ಅವರ ವಿರುದ್ದ ಬಿಜೆಪಿ ಅಪ್ಪಣೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಬಂಗಾಳದಲ್ಲಿ ಮೈತ್ರಿ ಕಾರ್ಯಗತಗೊಳ್ಳದೆ ಇರುವುದಕ್ಕೆ ಮೂರು ಕಾರಣಗಳಿದ್ದು ಆ ಮೂರು ಕಾರಣಗಳು ಅಧೀರ್ ರಂಜನ್ ಚೌಧರಿ ಅವರೆ ಆಗಿದ್ದಾರೆ. ಇಂಡಿಯಾ ಒಕ್ಕೂಟ ಅನೇಕ ವಿರೋಧಿಗಳನ್ನು ಹೊಂದಿದೆ. ಅದರಲ್ಲಿ ಬಿಜೆಪಿ ಮತ್ತು ಅಧೀರ್ ರಂಜನ್ ಚೌಧರಿ ಒಕ್ಕೂಟದ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಿದ್ದರು.
ಮಮತಾ ಬ್ಯಾನರ್ಜಿ ವಿರುದ್ಧ ಅಧೀರ್ ರಂಜನ್ ಚೌಧರಿ ಹಲವು ಹೇಳಿಕೆ ನೀಡಿದ ನಂತರ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಮಮತಾ ಎರಡು ದಿನಗಳ ಹಿಂದೆ ಹೇಳಿದ್ದರು.