ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಪೂರೈಕೆದಾರ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್) 2014ರ ಮೇ ತಿಂಗಳಿನಿಂದ 2024ರ ಮಾರ್ಚ್ ತಿಂಗಳವರೆಗೆ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ಗೆ (ಆರ್‌ಜೆಐಎಲ್) ಬಿಲ್ ನೀಡದ ಕಾರಣದಿಂದಾಗಿ ಸರ್ಕಾರಕ್ಕೆ ಬರೋಬ್ಬರಿ 1,757.76 ಕೋಟಿ ರೂಪಾಯಿ ನಷ್ಟವಾಗಿದೆ.
ಬಿಎಸ್‌ಎನ್‌ಎಲ್‌ನ ಮೂಲಸೌಕರ್ಯ ಬಳಕೆ ವಿಚಾರದಲ್ಲಿ ರಿಲಯನ್ಸ್ ಜಿಯೋ ನಡುವೆ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ ಬಿಎಸ್‌ಎನ್‌ಎಲ್ ಶುಲ್ಕವನ್ನು ವಿಧಿಸದ ಕಾರಣದಿಂದಾಗಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
ಇದನ್ನು ಓದಿದ್ದೀರಾ? ಜಿಯೋ ಬಳಕೆದಾರರಿಗೆ ರೀಚಾರ್ಜ್ ತುಟ್ಟಿ; ಹೊಸ ಬೆಲೆಗಳು ಹೀಗಿವೆ
ಬಿಎಸ್‌ಎನ್‌ಎಲ್‌ನ ಮೂಲಸೌಕರ್ಯವನ್ನು ಹಂಚಿಕೊಳ್ಳಲು ರಿಲಯನ್ಸ್ ಜಿಯೋ ಜೊತೆ ಮಾಸ್ಟರ್ ಸರ್ವಿಸ್ ಒಪ್ಪಂದ (ಎಂಎಸ್‌ಎ) ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದವು ಬಿಎಸ್‌ಎನ್‌ಎಲ್‌ನ ಮೂಲ ಸೌಕರ್ಯವನ್ನು ಜಿಯೋಗೆ 15 ವರ್ಷಗಳ ಕಾಲ ಬಳಸಲು ಅವಕಾಶ ನೀಡುತ್ತದೆ.
ಈ ಒಪ್ಪಂದ ನಡೆದ ಸಂದರ್ಭದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಒಪ್ಪಂದದಿಂದಾಗಿ ಸರ್ಕಾರಕ್ಕೆ ನಷ್ಟವಾಗಲಿದೆ, ಖಾಸಗಿ ಟೆಲಿಕಾಂ ಸಂಸ್ಥೆಗಳು ವಿಸ್ತಾರವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹಲವು ಪ್ರಗತಿಪರ ಸಂಘಟನೆಗಳು, ಎಡ ಪಕ್ಷಗಳು ಪ್ರತಿಭಟನೆ, ಧರಣಿ ನಡೆಸಿತ್ತು. ಈ ವಿರೋಧಗಳ ಮಧ್ಯೆಯೂ ಒಪ್ಪಂದ ನಡೆದಿತ್ತು.
ಪ್ರಧಾನಿ ನರೇಂದ್ರ ಮೋದಿ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಉತ್ತೇಜನ ನೀಡಿ ಬಿಎಸ್‌ಎನ್‌ಎಲ್ ಅನ್ನು ಮುಚ್ಚುವ ಷಡ್ಯಂತ್ರ ಮಾಡುತ್ತಿದ್ದಾರೆ. ಅದರಲ್ಲೂ ತನ್ನ ಸ್ನೇಹಿತ ಗೌತಮ್ ಅದಾನಿ ಕುಟುಂಬಕ್ಕೆ ಸೇರಿದ ಸಂಸ್ಥೆಯನ್ನು ಬೆಳೆಸುವುದು ಮೋದಿ ತಂತ್ರ ಎಂದು ವಿಪಕ್ಷಗಳು ಆರೋಪಿಸಿತ್ತು. ವಿಪಕ್ಷಗಳು ಬಿಎಸ್‌ಎನ್‌ಎಲ್ ಪತನದ ಎಚ್ಚರಿಕೆಯನ್ನೂ ನೀಡಿತ್ತು. ಅದರಂತೆ ಈ ಹತ್ತು ವರ್ಷದ ಅವಧಿಯಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಉಳಿದ ಖಾಸಗಿ ಟೆಲಿಕಾಂ ಸಂಸ್ಥೆಗಳನ್ನೆಲ್ಲಾ ಹಿಂದೆ ತಳ್ಳಿ ಜಿಯೋ ವಿಸ್ತಾರವಾಗಿ ಬೆಳೆದುಕೊಂಡಿದೆ.
